
ಶಿವಮೊಗ್ಗ :- ಏಳು ಕೋಟಿ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಇದರ ಗೌರವಾನ್ವಿತ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಬೈಲಾ ಅಂಗೀಕರಿಸಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಇಂದು ಕನ್ನಡ ನಾಡು ನುಡಿ ಜಗೃತಿ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡ-ಕನ್ನಡಿಗ, ಕರ್ನಾಟಕದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಿರಂತರವಾಗಿ ಕಳೆದ ೧೧೦ ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಈಚಿನ ದಿನಗಳಲ್ಲಿ ಪರಿಷತ್ತು ತನ್ನ ಘನ ಉದ್ದೇಶವನ್ನು ಮರೆತಂತೆ ಕಾಣುತ್ತಿದೆ. ಅದರಲ್ಲೂ ಈಗಿನ ಅಧ್ಯಕ್ಷರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಿಷತ್ತಿನ ಘನತೆಗೆ ಧಕ್ಕೆ ಬರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ ಹಾಗೂ ತಾತ್ವಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕಳೆದ ೧೦ ವರ್ಷದಿಂದ ಬೈಲಾ ತಿದ್ದುಪಡಿ ಆಗಿವೆ. ಪರಿಷತ್ತಿನ ಅವಧಿ ವಿಸ್ತರಣೆ, ಜನತಂತ್ರ ಮಾದರಿಯಲ್ಲಿ ಆಯ್ಕೆಯಾದ ೩೫ ಘಟಕಗಳ ಚುನಾಯಿತ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ದುರುದ್ದೇಶ ದಿಂದ ೨೧ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಸೇರಿದಂತೆ ಹಲವು ತಿದ್ದುಪಡಿ ಆಗಿವೆ. ಇಂತಹ ಅಸಂವಿಧಾನಿಕ, ಸರ್ವಾಧಿಕಾರತ್ವದ ದುರುದ್ದೇಶಪೂರಿತ ಬೈಲಾ ತಿದ್ದುಪಡಿಗೆ ಯಾವುದೇ ಅವಕಾಶ ವನ್ನು ನೀಡಬಾರದು. ಇಂತಹ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ವಕೀಲರಾದ ಶ್ರೀಪಾಲ್, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ಎಸ್.ಬಿ. ಅಶೋಕ್ ಕುಮಾರ್ ದೇವಾನಂದ, ಪುಟ್ಟಯ್ಯ, ಅಕ್ಷತಾ ಮೊದಲಾದವರಿದ್ದರು.
