google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ದೇಶದ ಅಭಿವೃದ್ದಿ ಸಹ ಉತ್ತಮವಾಗಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ರೈತರಿಗೆ ಸಹಕಾರಿಯಾಗಿದ್ದು ಉತ್ತಮ ವಹಿವಾಟು ಮೂಲಕ ಜಿಲ್ಲೆಗೆ ಕಿರೀಟಪ್ರಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 2019-20 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಶಿವಮೊಗ್ಗ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಬುಧವಾರದಂದು ಉದ್ಘಾಟಿಸಿ ಅವರು ಮಾತನಾಡಿ, ಎಪಿಎಂಸಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಹಿವಾಟು ನಡೆಸುವ ಕೇಂದ್ರವಾಗಿರುವುದು ಹೆಮ್ಮೆಯ ವಿಷಯ. ರೈತರನ್ನು ಯಾರೂ ಕಡೆಗಣಿಸಬಾರದು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ೩೫ ವರ್ಷಗಳ ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದಾಗ ಸಾಕಷ್ಟು ಟೀಕೆಗಳು ಬಂದವು. ಆದರೆ ಇದೇ ಯೋಜನೆಯ ಫಲವಾಗಿ ಇಂದು ರೈತರು ಅಭಿವೃದ್ದಿಯಾಗಿದ್ದು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿದೆ. ಅಡಿಕೆ, ಶುಂಠಿ, ಅರಿಶಿನ, ಅನಾನಸ್ ಇತರೆ ಬೆಳೆಗೆ ಬೇಸಿಗೆಯಲ್ಲೂ ನೀರಿನ ಅವಶ್ಯಕತೆ ಇದ್ದು, ಉಚಿತ ಕರೆಂಟ್‌ನಿಂದ ರೈತರಿಗೆ ಬಹಳ ಅನುಕೂಲವಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ 21 ಸಾವಿರ ಕೋಟಿ ಹಣವನ್ನು ರೈತರ ಪರವಾಗಿ ಪಾವತಿಸುತ್ತಿದೆ. ರೈತರಿಗೆ ಇದೊಂದು ಕೊಡುಗೆಯಾಗಿದ್ದು ಈ ಸೌಲಭ್ಯ ಪಡೆದ ರೈತರು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ರೈತರ ಚಟುವಟಿಕೆಗಳಿಂದಾಗಿ ಎಪಿಎಂಸಿ, ಮ್ಯಾಮ್‌ಕೋಸ್, ಹಾಪ್‌ಕಾಮ್ಸ್, ಇತರೆ ಕೃಷಿ ಮತ್ತು ತೋಟಗಾರಿಕೆ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು, ಆದಾಯ ಸಾಧ್ಯವಾಗುತ್ತಿದೆ. ಶಿವಮೊಗ್ಗ ಎಪಿಎಂಸಿ ಯಲ್ಲಿ ರೂ. 2475 ಕೋಟಿ ವ್ಯವಹಾರ ನಡೆಯುತ್ತಿದ್ದು, ರೂ. 250 ಕೋಟಿ ಜಿಎಸ್‌ಟಿ ಪಾವತಿ ಮಾಡುತ್ತಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಮಳಿಗೆಗಳ ಅವಶ್ಯಕತೆ ಇದ್ದು, ಹೀಗೆಯೇ ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಪಿಎಂಸಿ ಕಾರ್ಯದರ್ಶಿ ಸತೀಶ್ ಹೆಚ್.ವೈ, ಪ್ರಮುಖರಾದ ಪಲ್ಲವಿ, ವಿಜಯಕುಮಾರ್, ಚಂದ್ರಭೂಪಾಲ್, ಮಧು, ದೇವಿಕುಮಾರ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *