google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿ ಗೊಳಿಸಲಾಗುವುದೆಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಮಹಾನಗರಪಾಲಿಕೆ ಚುನಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿವಮೊಗ್ಗ ಪಾಲಿಕೆಯಲ್ಲಿ ನಿಕಾಯ (ಬಾಡಿ) ಇಲ್ಲದೇ ಒಂದೂವರೆ ವರ್ಷ ಆಗಿದೆ. ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಸಂಬಂಧಿಸಿದ ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಸಹ ಕೋರಲಾಗಿದೆ. ಸರ್ಕಾರದಿಂದ ಈ ಕುರಿತು ಸ್ಪಂದನೆ ಬಾರದ ಕಾರಣ ಸುಪ್ರೀಂ ಕೋರ್ಟ್ ಆದೇಶದನ್ವಯ ಉಚ್ಛ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿ ಪಾಲಿಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಜೂನ್ ವೇಳೆಗೆ ಉಚ್ಛ ನ್ಯಾಯಾಲಯದಲ್ಲಿ ಈ ರಿಟ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಚುನಾವಣೆ ಕುರಿತು ಸರ್ಕಾರದಿಂದ ಸ್ಪಂದನೆ ಬಂದ ತಕ್ಷಣ ದಿನಾಂಕ ನಿಗದಿಗೊಳಿಸ ಲಾಗುವುದು ಎಂದ ಅವರು, ಕಳೆದ ಆಗಸ್ಟ್ ಮಾಹೆಯಲ್ಲಿಯೇ ಚುನಾವಣೆಗೆ ಸಂಬಂಧಿಸಿದಂತೆ ಮತದಾತರರ ಪಟ್ಟಿ ತಯಾರಿಸುವ ವೇಳಾಪಟ್ಟಿ ಹೊರಡಿಸಲಾಗಿತ್ತು. ಕಾರಣಾಂತರ ದಿಂದ ಅದರ ಪ್ರಕಾರ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿಲ್ಲ. ಕರಡು ಮತದಾರರ ಪಟ್ಟಿ ಮಾತ್ರ ಸಿದ್ದವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿಶೇಷವಾಗಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಸಿದ್ದ ಮಾಡಿಕೊಳ್ಳ ಬೇಕು ಎಂದು ಸೂಚಿಸಿದರು.

ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್ ಮಾತನಾಡಿ, ಆಗಸ್ಟ್ ಮಾಹೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವೇಳಾಪಟ್ಟಿ ಹೊರಡಿಸಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡುಗಳಿದ್ದು 2011ರ ಜನಗಣತಿ ಪ್ರಕಾರ 3.22 ಲಕ್ಷ ಜನಸಂಖ್ಯೆ ಇದೆ. ಒಟ್ಟು 288 ಮತಗಟ್ಟೆಗಳಿವೆ. 2024-2025 ರಂತೆ 133479 ಪುರುಷ, 141480 ಮಹಿಳೆ, 17ಇತರೆ ಸೇರಿದಂತೆ 274976 ಮತದಾರರು ಇದ್ದಾರೆ. ಇದರಲ್ಲಿ 85 ವರ್ಷ ಮೀರಿದ ೨೫೮೩ ಹಾಗೂ ವಿಕಲಚೇತನ 1465 ಮತದಾರರು ಇದ್ದಾರೆ.

ಕರಡು ಮತದಾರರ ಪಟ್ಟಿ ಸಿದ್ದವಾಗಿದೆ. ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *