
ಶಿವಮೊಗ್ಗ :- ಇದೇ ಮೇ 18ರಿಂದ 20ರ ವರೆಗೆ ಮೂರು ದಿನಗಳ ಕಾಲ ನಗರದಲ್ಲಿ ನಡೆಯುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆದಿದ್ದು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಅವರ ನೇತೃತ್ವದ ತಂಡವು ಇಂದು ಕ್ರೀಡಾಪಟುಗಳ ಟ್ರ್ಯಾಕ್ಶೂಟ್ ಜೊತೆಗೆ ಬಹುಮಾನದ ಟ್ರೋಫಿ ಅನಾವರಣಗೊಳಿಸಿತು.
ನಗರದ ಆರ್ಟಿಒ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಇಂದು ಬೆಳಗ್ಗೆ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಟ್ರ್ಯಾಕ್ಶೂಟ್ ಜೊತೆಗೆ ಬಹುಮಾನದ ಟ್ರೋಫಿ ಅನಾವರಣಗೊಳಿಸಿದ ಬಳಿಕ, ಕ್ರೀಡಾಕೂಟದ ಸಿದ್ಧತೆಯ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಕ್ರೀಡಾಕೂಟದ ಸಿದ್ಧತೆಗಳು ಭರದಿಂದ ಸಾಗಿವೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವುದು ಕೂಡ ಖಚಿತವಾಗಿದೆ. ಮೇ 18ರಂದು ಸಂಜೆ 5.30ರ ಬದಲು 4 ಗಂಟೆಗೆ ಮುಖ್ಯಮಂತ್ರಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. 3.45ರ ಒಳಗೆ ಎಲ್ಲಾ ಸರ್ಕಾರಿ ನೌಕರರು ಕ್ರೀಡಾಂಗಣದಲ್ಲಿ ಉಪಸ್ಥಿತರಿರಲು ಕೋರಿದರು.
ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಮಾಹಿತಿ ದೊರೆತಿದೆ. ಹೆಲಿಕಾಪ್ಟರ್ನಲ್ಲಿ ಅವರು ಬೆಳಗ್ಗೆಯೇ ಶಿವಮೊಗ್ಗಕ್ಕೆ ಬಂದು, ಇಲ್ಲಿಂದ ಚಿಕ್ಕಮಗಳೂರಿಗೆ ತೆರಳಿಲಿದ್ದಾರೆ. ಅಲ್ಲಿಂದ ಶಿವಮೊಗ್ಗಕ್ಕೆ ಬಂದು ನೌಕರರ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಅವರು ತುರ್ತಾಗಿ ವಾಪಾಸ್ ಬೆಂಗಳೂರಿಗೆ ತೆರಬೇಕಿರುವ ಕಾರಣ, ಸಮಾರಂಭದ ಸಮಯದಲ್ಲಿ ಕೊಂಚ ಬದಲಾವಣೆ ಆಗಿದೆ. ಮುಖ್ಯಮಂತ್ರಿಯವರು ವಾಪಾಸ್ ಬೆಂಗಳೂರಿಗೆ ಬೇಗನೆ ತೆರಳಬೇಕಿರುವ ಕಾರಣ, ೫ ಗಂಟೆಗೆ ನಿಗಧಿಯಾಗಿದ್ದ ಉದ್ಘಾಟನೆ ಕಾರ್ಯಕ್ರಮವು ಒಂದು ಗಂಟೆ ಮುಂಚಿತವಾಗಿ ಅಂದರೆ 3.45 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪುನರುಚ್ಚರಿಸಿದರು.

ಕ್ರೀಡಾಕೂಟವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲುದ್ದೇಶಿಸಿದ್ದೇವೆ. ಕ್ರೀಡಾಕೂಟದ ಆರಂಭದ ವೇಳೆ ನೆಹರು ಕ್ರೀಡಾಂಗಣದಲ್ಲಿ ಧ್ವಜರೋಹಣ, ಬಲೂನ್ ಹಾರಿಬಿಡುವುದು, ಕ್ರೀಡಾಜ್ಯೋತಿ ಬೆಳಗಿಸುವುದು ..ಇತ್ಯಾದಿ ಕಾರ್ಯಕ್ರಮಗಳಿಗೆ ಎಲ್ಲ ಸಿದ್ಧತೆ ನಡೆದಿದೆ. ಪ್ರತ್ಯೇಕ ತಂಡಗಳಿಗೆ ಜವಾಬ್ದಾರಿ ನೀಡಲಾಗಿದೆ. 5.30ಕ್ಕೆ ಕಾರ್ಯಕ್ರಮ ಮುಕ್ತಾಯಗೊಂಡರೆ ಮುಖ್ಯಮಂತ್ರಿಗಳು ವಾಪಾಸ್ ತೆರಳುವುದಕ್ಕೂ ಅನುಕೂಲವಾಗಲಿದೆ ಎನ್ನುವುದಕ್ಕೆ ಈ ಬಗ್ಗೆ ಉಸ್ತುವಾರಿ ಸಚಿವರಿಂದಲೂ ಈ ಬಗ್ಗೆ ಸೂಚನೆ ಬಂದಿದೆ ಎಂದು ತಿಳಿಸಿದರು.
ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಆಗಮಿಸುತ್ತಿದ್ದಾರೆ. ಇಬ್ಬರೂ ಹೆಲಿಕಾಪ್ಟರ್ನಲ್ಲಿ ಒಟ್ಟಿಗೆ ಬರುತ್ತಾರೋ ಅಥವಾ ಪ್ರತ್ಯೇಕವಾಗಿ ಬರುತ್ತಾರೋ ಆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುಖ್ಯಮಂತ್ರಿಗಳು ಅಂದು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಬರುವುದು ಖಚಿತವಾಗಿದೆ. ಉಳಿದಂತೆ ಆಹ್ವಾನಿಸಿದ ಎಲ್ಲಾ ಗಣ್ಯರಿಗೂ ಮತ್ತೊಮ್ಮೆ ಆಹ್ವಾನಿಸುವ ಕೆಲಸ ಆಗಿದೆ. ಎಲ್ಲರೂ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ನೌಕರರಿಗೆ ವಸತಿ, ಊಟ ಜತೆಗೆ ಸಾರಿಗೆ ವ್ಯವಸ್ಥೆಯ ಸಿದ್ಧತೆಯೂ ಆಗಿದೆ. ಹೊರ ಜಿಲ್ಲೆಗಳಿಂದ ಬರುವ ಪ್ರತಿಯೊಬ್ಬ ನೌಕರರಿಗೂ ತಮ್ಮ ವಾಸ್ತವ್ಯ, ಭಾಗವಹಿಸುವ ಆಟ, ಕೋಚ್, ಸಾರಿಗೆ ವ್ಯವಸ್ಥೆಯ ಸಂಪೂರ್ಣ ವಿವರ ಅವರ ಮೊಬೈಲ್ ನಲ್ಲಿಯೇ ಲಭ್ಯವಾಗುವ ಹಾಗೆ ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ತಮ್ಮ ಹೆಸರಿನ ಮುಂದಿನ ಕ್ಯೂ ಆರ್ ಕೋಡ್ ಅನ್ನು ಅವರು ಸ್ಕ್ಯಾನ್ ಮಾಡಿದರೆ ಅದೆಲ್ಲದರ ವಿವರ ತಿಳಿಯಲಿದೆ. ಯಾರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಕ್ರೀಡಾಕೂಟವನ್ನು ನಡೆಸಲು ಉದ್ದೇಶಿಸಿದ್ದೇವೆ ಎಂದು ವಿವರಿಸಿದರು. ಬಳಿಕ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಆರ್. ಪಾಪಣ್ಣ, ಶಿಕ್ಷಕರ ಸಂಘದ ರಾಜಧ್ಯಕ್ಷ ಸಿದ್ದಬಸಪ್ಪ, ಪದಾಧಿಕಾರಿಗಳಾದ ದಿನೇಶ್, ಸತೀಶ್ ಹಾಗೂ ಮಾರುತಿ ಇದ್ದರು.
