google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಂಡುಬರುತ್ತಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಕೂಡ ಜೋರಾಗಿದ್ದು, ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಖರೀದಿಸಲು ಜನರು ಜಾತ್ರೆ ರೀತಿಯಲ್ಲಿ ಹೋಗುತ್ತಿದ್ದಾರೆ.

ಪ್ರತಿಭಾರಿಯೂ ಹಬ್ಬಗಳು ಬೆಲೆ ಏರಿಕೆಯ ಬಿಸಿಯಲ್ಲಿ ನಡೆಯುತ್ತಿದ್ದವು. ಆದರೆ ಈ ಬಾರಿ ಹೂವು, ಹಣ್ಣು, ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಅದರಲ್ಲೂ ಚೆಂಡಿಹೂವು ನಗರಕ್ಕೆ ಅಪಾರ ಪ್ರಮಾಣದಲ್ಲಿ ಬಂದಿದ್ದು, ಜೊತೆಗೆ ಮಳೆಯ ಕಿರಿಕಿರಿಯೂ ಇದ್ದಿದ್ದರಿಂದ ಮೊದಲ ದಿನ 150 ರೂ.ಗೆ ಒಂದು ಕೆ.ಜಿ. ಇದ್ದ ಚೆಂಡಿಹೂವು ಈ ದಿನ 50-80 ಆಗಿದ್ದು, ಇಳಿದಿದೆ. ಹಾಗೆಯೇ ಸೇವಂತಿಗೆ ಹೂವಿನ ದರ ಕೂಡ ಇಳಿಕೆಯಾಗಿತ್ತು. ಹಬ್ಬದ ಸಂದರ್ಭದಲ್ಲೇ ಮಳೆ ಆಗುತ್ತಿರುವ ಕಾರಣ ಹೂವಿನ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ವರಮಹಾಲಕ್ಷ್ಮೀ ಮತ್ತು ದಸರಾ ಹಬ್ಬಗಳಲ್ಲಿ ಇದ್ದ ಹೂವಿನ ಬೇಡಿಕೆ ಈಗಿಲ್ಲದಂತಾಗಿದೆ.

ನಗರದ ಗಾಂಧಿ ಬಜರ್, ದುರ್ಗಿಗುಡಿ, ಬಿ.ಹೆಚ್. ರಸ್ತೆ, ಲಕ್ಷ್ಮಿ ಟಾಕೀಸ್ ವೃತ್ತ, ಪೊಲೀಸ್ ಚೌಕಿ, ಗೋಪಾಳ, ವಿದ್ಯಾನಗರ, ಸವಳಂಗ ರಸ್ತೆ, ಗೋಪಿ ವೃತ್ತ ಸೇರಿದಂತೆ ವಿವಿಧಡೆ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು. ಬೆಳಕಿನ ಹಬ್ಬದ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಆಲಂಕಾರಿಕ ವಸ್ತುಗಳ ಖರೀದಿ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಿ ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ದೀಪವೊಂದರ ಬೆಲೆ 5 ರೂ.ನಿಂದ 300 ರೂ.ವರೆಗೂ ಇದೆ.ತರಕಾರಿ, ದಿನಸಿ ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ವೀಳ್ಯದೆಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಿರು ಮಾರುಕಟ್ಟೆಗಳು ತಲೆಎತ್ತಿವೆ.

ಖರೀದಿ ಭರಾಟೆ : ಮಾರುಕಟ್ಟೆಯಲ್ಲಿ ಹಣ್ಣು, ಹೂವು, ದಿನಸಿ, ಪಟಾಕಿ, ಹೊಸ ಬಟ್ಟೆ ಖರೀದಿ ಜೋರಾಗಿತ್ತು. ಜೊತೆಗೆ ಪೂಜ ಸಾಮಗ್ರಿಗಳ ಮಳಿಗೆಗಳ ಬಳಿಯೂ ಜನರ ದಂಡು ಕಂಡುಬಂದಿತು. ನಗರದ ಮಾರುಕಟ್ಟೆಯಲ್ಲಿ ದೀಪವಾಳಿ ಹಬ್ಬದ ಅಂಗವಾಗಿ ವಿವಿಧ ವಸ್ತುಗಳನ್ನು ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ಕೂಡಿತ್ತು. ಗ್ರಾಹಕರನ್ನು ನಿಯಂತ್ರಣ ಮಾಡಲು ಪೊಲೀಸ್ರು ಹರಸಾಹಸ ಪಟ್ಟರು.

ಗಮನ ಸೆಳೆದ ಆಕಾಶಬುಟ್ಟಿ : ನಗರದ ಹಲವು ಅಂಗಡಿಗಳ ಎದುರು ನೇತುಹಾಕಿದ್ದ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ. ನಕ್ಷತ್ರ ಮಾದರಿ ಆಕಾಶ ಬುಟ್ಟಿ, ಚಂದ್ರನ ಆಕಾರದ ಆಕಾಶಬುಟ್ಟಿ ಜನರನ್ನು ಆಕರ್ಷಿಸುತ್ತಿವೆ. ಮಹಾರಾಷ್ಟ್ರ, ದೆಹಲಿ, ರಾಜಸ್ತಾನ ಮೊದಲಾದ ಕಡೆಗಳಿಂದ ವಿವಿಧ ವಿನ್ಯಾಸದ ಆಕಾಶ ಬುಟ್ಟಿಗಳು ಬಂದಿದ್ದು, ಮಾರುಕಟ್ಟೆಯುದ್ದಕ್ಕೂ ಕಂಗೊಳಿಸುತ್ತಿವೆ. ವರ್ಣ ವೈವಿಧ್ಯ ಹಾಗೂ ಗಾತ್ರವನ್ನು ಆಧರಿಸಿ ಆಕಾಶಬುಟ್ಟಿಯ ದರವು ಕನಿಷ್ಠ 150ರಿಂದ ಗರಿಷ್ಠ 800 ರೂ.ವರೆಗೂ ದರವಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧ ಉಡುಪು, ವಾಹನ ಹಾಗೂ ಗೃಹಪಯೋಗಿ ವಸ್ತುಗಳ ಮಾರಾಟ ಬಲು ಜೋರಾಗಿದೆ. ಕಂಪನಿಗಳು ಸಾಕಷ್ಟು ರಿಯಾಯಿತಿ ಹಾಗೂ ವಿನಾಯಿತಿಗಳನ್ನು ನೀಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ವಿವಿಧ ಮಾಲ್‌ಗಳು, ಬಟ್ಟೆ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸಲು ಹೂವು, ಹಣ್ಣು ಮತ್ತು ವಿವಿಧ ಪೂಜ ಸಾಮಾಗ್ರಿಗಳ ಖರೀದಿ ಜೋರಾಗಿದೆ. ದೀಪಾವಳಿ ಎಂದರೆ ದೀಪ ಹಚ್ಚುವುದು, ಪಟಾಕಿ ಸಿಡಿಸುವುದು ಈ ಹಬ್ಬದ ಸಂಭ್ರಮ. ಮಾರುಕಟ್ಟೆಯಲ್ಲಿ ಪಟಾಕಿಗಳ ಮಾರಾಟ ಜೋರಾಗಿ ನಡೆಯಿತು.

ಫ್ರೀಡಂ ಪಾರ್ಕ್ ಎದುರು ಪಟಾಕಿ ಖರೀದಿಗಾಗಿ ಜನಜಂಗುಳಿ ಟ್ರಾಫಿಕ್ ಜಾಮ್ :

ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಸುಮಾರು 70ಕ್ಕೂ ಅಧಿಕ ಪಟಾಕಿ ಮಳಿಗೆಗಳನ್ನು ಹಾಕಲಾಗಿದೆ. ಇಲ್ಲಿ ಗ್ರಾಹಕರು ತಮಗೆ ಇಷ್ಟವಾದ ಪಟಾಕಿಗಳನ್ನು ಖರೀದಿಸಿದರು. ಪಟಾಕಿ ಗಿಫ್ಟ್‌ಪ್ಯಾಕ್ ಬೆಲೆ 300 ರೂ. ನಿಂದ 1500 ರೂ. ವರೆಗೆ ಇತ್ತು. ಪಟಾಕಿ ಖರೀಧಿಸಲು ಜನಜಂಗುಳಿ ಹೆಚ್ಚಾಗಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ.

ಇಂದು ಮತ್ತೆ ನಾಳೆ ಅಮಾವಾಸ್ಯೆ ಇರುವುದರಿಂದ ಲಕ್ಷ್ಮೀಪೂಜೆ ಸಂಭ್ರಮ ಎಲ್ಲೆಡೆ ಕಂಡುಬಂದಿದೆ. ಅಂಗಡಿ ಮಳಿಗೆಗಳಲ್ಲಿ, ಕಾರ್ಖಾನೆಗಳಲ್ಲಿ ಲಕ್ಷ್ಮೀಪೂಜೆಗೆ ಸಿದ್ಧತೆ ಭರದಿಂದ ನಡೆದಿದೆ. ಗ್ರಾಮೀಣ ಭಾಗದಲ್ಲಿ ದೀಪಾವಳಿಯ ಸಂಭ್ರಮದ ವಾತಾವರಣ ಕಂಡು ಬಂದಿದೆ. ಉದ್ಯೋಗದ ಸಲುವಾಗಿ ಪರ ಊರುಗಳಲ್ಲಿ ನೆಲೆಸಿರುವವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಇಂದ್ರಗಿತ್ತಿರುವುದರಿಂದ ರೈಲು ಹಾಗೂ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಕೆಎಸ್‌ಆರ್‌ಟಿಸಿ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ.

Leave a Reply

Your email address will not be published. Required fields are marked *