ಶಿವಮೊಗ್ಗ :- ಕುವೆಂಪು ವಿವಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ, ವ್ಯಾಲ್ಯೂ ಪ್ರಾಡೆಕ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಏ. 10ರಿಂದ 12ರವರೆಗೆ ಶಂಕರಘಟ್ಟದ ಜನ ಸಹ್ಯಾದ್ರಿ ಬಸವ ಸಭಾಭವನದಲ್ಲಿ ಮೂರು ದಿನಗಳ ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವ ವೈವಿಧ್ಯತೆಯ ಸುಸ್ಥಿರ ಬಳಕೆ ಕುರಿತ ಅಂತರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮ್ಮೇಳನದ ಯೋಜನಾ ಕಾರ್ಯದರ್ಶಿ ಪ್ರೊ. ವಿ. ಕೃಷ್ಣ, ಇದೊಂದು ಐತಿಹಾಸಿಕ ಮಹತ್ವದ ಸಮ್ಮೇಳನವಾಗಿದೆ. ಕುವೆಂಪು ವಿವಿ, ಕೆಳದಿ ಶಿವಪ್ಪನಾಯಕ ವಿವಿಯ ಸ್ನಾತಕೋತ್ತರ ಜೈವಿಕ ತಂತ್ರಜನ ವಿಭಾಗ, ಅನ್ವಯಿಕ ಸಸ್ಯಶಾಸ್ತ್ರ ವಿಭಾಗ ಸೇರಿದಂತೆ ಸುಮಾರು 8ವಿಭಾಗಳನ್ನೊಳಗೊಂಡು ವ್ಯಾಲ್ಯೂ ಪ್ರೊಡಕ್ಟ್ ಸಂಸ್ಥೆಯ ಸಹಕಾರದಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮ್ಮೇಳನದಲ್ಲಿ ಸುಮಾರು 644 ಸಂಶೋಧಕರು, 200ಕ್ಕೂ ಹೆಚ್ಚು ಪ್ರಬಂಧ ಮಂಡನೆ ಮಾಡುವರು ಭಾಗವಹಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯದ ಸಂಶೋಧಕರು ವಿಷಯ ಮಂಡನೆ ಮಾಡುತ್ತಿದ್ದು, ಈಗಾಗಲೇ ಸುಮಾರು 150ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಇದರ ಉದ್ಘಾಟನಾ ಸಮಾರಂಭ ಏ. ೧೦ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಹೈದರಾಬಾದ್ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೋಡಿಲೆ ಉದ್ಘಾಟಿಸ ಲಿದ್ದು, ಥೈಲ್ಯಾಂಡ್ ನ ವಿವಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಸುಖಾಡಾ ಸುಕ್ರೋಂಗ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಆಲಬಾಮಾ ವಿವಿ ಡಾ. ದರ್ಶನ್, ಕೆಳದಿ ಕೃಷಿ ವಿವಿ ಕುಲಪತಿ ಪ್ರೊ. ಆರ್.ಸಿ. ಜಗದೀಶ್, ಕುವೆಂಪು ವಿವಿ ಕುಲಪತಿ ಪ್ರೊ ಶರತ್ ಅನಂತ ಮೂರ್ತಿ, ವ್ಯಾಲ್ಯೂ ಪ್ರಾಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ. ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿರುವರು ಎಂದರು.
ಕುವೆಂಪು ವಿವಿಯ ಕುಲಸಚಿವ ಗೋಪಿನಾಥ್ ಮಾತನಾಡಿ, ಪಶ್ಚಿಮ ಘಟ್ಟದಲ್ಲಿ ಹಲವು ಔಷಧಿ ಸಸ್ಯಗಳಿವೆ. ಈ ಔಷಧಿಯ ಸಸ್ಯಗಳಿಂದ ಹಲವು ರೋಗಗಳ ಚಿಕಿತ್ಸೆಗೆ ರಾಮಬಾಣದ ಗುಣಗಳಿವೆ. ಇದನ್ನು ಅಭಿವೃದ್ಧಿಪಡಿಸಿ ಸಮುದಾಯಕ್ಕೆ ತಿಳಿಸಿಕೊಡುವುದು ವಿವಿಗಳ ಕರ್ತವ್ಯವವಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿವೆ ಎಂದರು.

ವ್ಯಾಲ್ಯೂ ಪ್ರಾಡಕ್ಟ್ ನ ಎಂಡಿ ಡಾ. ಎ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಕಳೆದ 14 ವರ್ಷಗಳಿಂದ ನಾವು ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದೇವೆ. ಶಿವಮೊಗ್ಗದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಇದು. ಹಾಗಾಗಿ ಶ್ರೇಷ್ಟ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಮಾಜದಲ್ಲಿ ಸಾರ್ವಜನಿಕರು ಉತ್ತಮ ಆರೋಗ್ಯವನ್ನು ಉತ್ತೇಜಿಸು ವಲ್ಲಿ ಜಗೃತಿ ಮೂಡಿಸುತ್ತಾ ಬಂದಿದೆ. ಅಮೃತ್ ನೋನಿ ಉತ್ಪನ್ನವೇ ಇದಕ್ಕೆ ಉದಾಹರಣೆಯಾಗಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯುವ ವಿಜನಿಗಳಿಗೆ ಸಂಶೋಧನೆ ಮಾಡಲು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಎರಡು ಪ್ರಮುಖ ವಿವಿಗಳೊಂದಿಗೆ ಸೇರಿ ಈ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಚಾಲಕ ಪ್ರೊ.ಬಿ. ತಿಪ್ಪೇಸ್ವಾಮಿ, ಡಾ. ಡಿ. ತಿಪ್ಪೇಶ್, ಕುವೆಂಪು ವಿವಿ ಕುಲಸಚಿವ ಎ.ಎಲ್. ಮಂಜುನಾಥ್, ಪಿಆರ್‌ಒ ಸತ್ಯಪ್ರಕಾಶ್, ಇಂಚರಾ ನಾಡಿಗ್, ಸಿ.ಎಸ್. ಶಶಿಕಾಂತ್ ನಾಡಿಗ್ ಇನ್ನಿತರರು ಇದ್ದರು.
