ಶಿವಮೊಗ್ಗ :- ನಿಸ್ವಾರ್ಥ ಸೇವೆ ಮಾಡುವವರಿಗೆ ಸ್ಪೂರ್ತಿಯ ಸೆಲೆ ನಾವಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಮಾಜಸೇವಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ಸಾಹಸ ಮತ್ತು ಸಂಸ್ಕತಿ ಅಕಾಡೆಮಿ, ಆರೋಗ್ಯ ಭಾರತಿ, ತೀರ್ಥಹಳ್ಳಿ ಎಂಐಒ ಆಸ್ಪತ್ರೆ, ಮಥುರಾ ರಜತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜನಜಗೃತಿ ಸರಣಿ ಕಾರ್ಯಕ್ರಮದ ಸಮಾರೋದಲ್ಲಿ ಸಮಾಜ ಸೇವಕರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನಗಳು ಸೇವೆ ಮಾಡುವವರಿಗೆ ಪ್ರೇರಣೆ ನೀಡುತ್ತವೆ. ಮನುಕುಲದ ಉದ್ಧಾರಕ್ಕಾಗಿ ಸೇವೆ ಎಂಬುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತೀರ್ಥಹಳ್ಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗದ ಶರಣ್ಯ ಸಂಸ್ಥೆ ಸೇವೆ ಶ್ಲಾಘನೀಯವಾದುದು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಆರ್.ಎಸ್.ಎಸ್. ಕೂಡ ಸೇವಾ ಸಂಸ್ಥೆಯ ಒಂದು ಭಾಗವೇ ಆಗಿದೆ. ಅದರಲ್ಲೂ ವೈದ್ಯಕೀಯ ಸೇವೆಯನ್ನು ಆರ್.ಎಸ್.ಎಸ್.ನ ಹಲವು ವಿಭಾಗಗಳು ಮಾಡುತ್ತಾ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.
ತೀರ್ಥಹಳ್ಳಿಯ ಎಂಐಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಮತ್ತು ಮುಖ್ಯಸ್ಥ ಡಾ. ಸುರೇಶ್ ರಾವ್ ಮಾತನಾಡಿ, ಬಡವರ ಸೇವೆಯನ್ನು ಮಾಡುವವನೇ ನಿಜವಾದ ವೈದ್ಯ. ಸೇವೆಯ ಮನೋಧರ್ಮ ಇಲ್ಲದವರು ವೈದ್ಯರಾಗಬಾರದು ಎಂಬುದು ನಮ್ಮ ಅಭಿಪ್ರಾಯ. ಎಲ್ಲ ಬಡವರ, ಅಶಕ್ತರಿಗೆ ವೈದ್ಯರು ತಮ್ಮ ಹೃದಯನ್ನು ತೆರೆದಿಡಬೇಕು ಎಂದರು.
ಕ್ಯಾನ್ಸರ್ ಇಂದು ಸುನಾಮಿ ರೀತಿಯಲ್ಲಿ ಮಾನವನನ್ನು ಕಾಡುತ್ತಿದೆ. ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. ಪ್ರತಿ 7 ನಿಮಿಷಕ್ಕೊಬ್ಬರು ಸಾಯುತ್ತಿದ್ದಾರೆ. ಕ್ಯಾನ್ಸರ್ ಕೇವಲ ತಂಬಾಕು ಉತ್ಪನ್ನಗಳಿಂದ ಮಾತ್ರ ಬರುವುದಿಲ್ಲ. ಇದಕ್ಕೆ ಬೇರೆ ಬೇರೆ ರೀತಿಯ ಕಾರಣಗಳೂ ಇವೆ. ಪರಿಸರ, ಆಹಾರ, ಮುಂತಾದವುಗಳು ಇಂದು ಕ್ಯಾನ್ಸರ್ ಬರಲು ಕಾರಣವಾಗುತ್ತಿವೆ. ಭಾರತ ಕ್ಯಾನ್ಸರ್ ನ ಕ್ಯಾಪಿಟಲ್ ಎಂದೇ ಪ್ರಸಿದ್ಧವಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗಳು ಕೋಟ್ಯಂತರ ರೂ. ಮಲ್ಯದ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. 10 ಕೋಟಿ ಯಂತ್ರ ಕೊಂಡರೆ ಎರಡೂವರೆ ಕೋಟಿ ಜಿ.ಎಸ್.ಟಿ. ಕಟ್ಟಬೇಕಾಗುತ್ತದೆ. ಸರ್ಕಾರಗಳು ಇಂತಹ ಉಪಕರಣಗಳಿಗೆ ಜಿ.ಎಸ್.ಟಿ. ಕಡಿಮೆ ಮಾಡಿದರೆ ಬಡವರ ಪರ ಸೇವೆ ಮಾಡಲು ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ ಎನ್. ಗೋಪಿನಾಥ್, ಶರಣ್ಯ ಸಂಸ್ಥೆಯ ಡಿ.ಎಲ್. ಮಂಜುನಾಥ್, ಎಂಐಒನ ಮುಖ್ಯಸ್ಥ ಡಾ. ಸುರೇಶ್ ರಾವ್ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕೆ.ಎಸ್. ಶ್ರೀಧರ್, ಡಾ. ಪಲ್ಲವಿ, ಶಿಬಿರದ ಸಂಚಾಲಕ ಅ.ನಾ. ವಿಜಯೇಂದ್ರರಾವ್, ವಾಗೀಶ್ ಸೇರಿದಂತೆ ಹಲವರಿದ್ದರು.
