ಶಿವಮೊಗ್ಗ :- ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ಸಾಗಿತ್ತು. ಬೆಲೆ ಏರಿಕೆಯಾಗಿದ್ದರೂ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದರು.

ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ ಬಜರ್, ಎಪಿಎಂಸಿ ತರಕಾರಿ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪದ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಜನರು ತಾಜ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳನ್ನು ಖರೀದಿಸುತ್ತಿದ್ದರು.
ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ಧತೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಳಿ ಕಂಡುಬಂತು. ಗಾಂಧಿ ಬಜರ್, ಶಿವಪ್ಪ ನಾಯಕ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊಸ ಬಟ್ಟೆ ಖರೀದಿ, ದಿನಸಿ, ಮಾವಿನ ಸೊಪ್ಪು, ಬೇವಿನ ಹೂವು ಮತ್ತು ಸೊಪ್ಪು, ಹೂವು, ಹಣ್ಣು ಹಂಪಲು ಖರೀದಿಯಲ್ಲಿ ಜನರು ತೊಡಗಿದ್ದರು.
ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ನೆಹರೂ ರಸ್ತೆ, ಬಿ.ಎಚ್. ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಇತ್ತು. ಅಂಗಡಿಗಳಲ್ಲೂ ವ್ಯಾಪಾರ ಜೋರಾಗಿತ್ತು. ಪ್ರಮುಖ ವೃತ್ತಗಳಲ್ಲಿ ಮಾವು, ಕಹಿಬೇವು, ಬಾಳೆ ಕಂದು, ಹಣ್ಣು ಖರೀದಿ ನಡೆಯಿತು. ಹಣ್ಣಿನ ದರ ತುಸು ಏರಿಕೆಯಾಗಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದೆ.

ಯುಗಾದಿ ಮತ್ತು ರಂಜನ್ ಹಬ್ಬದ ರಜೆ ಪ್ರಯುಕ್ತ ಹೊರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಶಿವಮೊಗ್ಗಕ್ಕೆ ಬರುವ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.
