google.com, pub-9939191130407836, DIRECT, f08c47fec0942fa0

ಸಾಗರ :-  ರೂ. 1.45 ಕೋಟಿ ರೂ. ವೆಚ್ಚದ  2025-26ನೇ ಸಾಲಿನಲ್ಲಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಅಂದಾಜು ಆಯವ್ಯಯದ ಎಲ್ಲಾ ವಲಯಗಳಿಗೆ ಒತ್ತು ನೀಡಿ ಒಟ್ಟು 41.64 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ  ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು. 

 ನಗರಸಭೆ ಸಾಮಾನ್ಯಸಭೆಯಲ್ಲಿ ಅವರು 2025-26ನೇ ಸಾಲಿನ ಕರಡು ಆಯವ್ಯಯ ಮಂಡಿಸಿ, ಒಟ್ಟು 41.64 ಕೋಟಿ ರೂ. ಸ್ವೀಕೃತಿ ನಿರೀಕ್ಷಿಸಿದ್ದು, ರಾಜಸ್ವ ಪಾವತಿ, ಬಂಡವಾಳ ಪಾವತಿ ಸೇರಿ ಒಟ್ಟು 40.19 ಕೋಟಿ ರೂ. ವಿವಿಧ ವೆಚ್ಚದ ಬಾಬ್ತಿನಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಆಸ್ತಿ ತೆರಿಗೆಯಿಂದ 500 ಲಕ್ಷ, ನಳ ತೆರಿಗೆಯಿಂದ 185 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ ರೂ. 75 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ರೂ. 73 ಲಕ್ಷ ಸೇರಿ ಬೇರೆಬೇರೆ ಮೂಲದಿಂದ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಸ್ವೀಕೃತಿ ವಿಭಾಗದಲ್ಲಿ ನಗರಸಭೆ ಸ್ವಂತ ಮೂಲಗಳಿಂದ ರೂ. 10.48 ಕೋಟಿ, ರಾಜಸ್ವ ಅನುದಾನ ರೂ. 15.54 ಕೋಟಿ ರೂ., ವಿಶೇಷ ಅನುದಾನ ರೂ. 7.65 ಕೋಟಿ ನಿರೀಕ್ಷಿಸಲಾಗಿದೆ ಎಂದ ಅವರು, ಸರ್ಕಾರದಿಂದ ನೌಕರರ ವೇತನ ಅನುದಾನ ರೂ. 812.21 ಲಕ್ಷ, ಬೀದಿದೀಪ ನಿರ್ವಹಣೆಗೆ ವಿದ್ಯುಚ್ಚಕ್ತಿ ಅನುದಾನ ರೂ. 185 ಲಕ್ಷ, ನೀರು ಸರಬರಾಜು ನಿರ್ವಹಣೆಗೆ ರೂ. 511 ಲಕ್ಷ ರೂ. ಸೇರಿ ವಿವಿಧ ಅನುದಾನದಿಂದ 1554.21 ಲಕ್ಷ ರಾಜಸ್ವ ಅನುದಾನ ಆರ್ಥಿಕ ವರ್ಷದಲ್ಲಿ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.

2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಅನುದಾನ ರೂ. 265 ಲಕ್ಷ, ರಾಜ್ಯ ಸರ್ಕಾರದ ಎಸ್.ಎಫ್.ಸಿ. ಫಂಡ್‍ನಿಂದ 500 ಲಕ್ಷ ಸೇರಿ 765 ಲಕ್ಷ ಬಂಡಾವಳ ನಿರೀಕ್ಷೆ ಮಾಡಲಾಗಿದೆ. ಆರ್ಥಿಕ ವರ್ಷದಲ್ಲಿ 2624 ಲಕ್ಷ ರೂ. ರಾಜಸ್ವ ವೆಚ್ಚ ಮೀಸಲಿಟ್ಟಿದ್ದು ಇದರಲ್ಲಿ ನೌಕರರ ವೇತನ ಪಾವತಿಗೆ ರೂ. 821.21 ಲಕ್ಷ, ಬೀದಿದೀಪ ನಿರ್ವಹಣೆ ವಿದ್ಯುಚ್ಚಕ್ತಿಗಾಗಿ 185 ಲಕ್ಷ, ನೀರು ಸರಬರಾಜು ನಿರ್ವಹಣೆಗೆ ರೂ. 511 ಲಕ್ಷ, ಗುತ್ತಿಗೆ ಮತ್ತು ನೇರಪಾವತಿ ವೇತನ ವೆಚ್ಚ ರೂ. 200 ಲಕ್ಷ, ಪೌರ ಕಾರ್ಮಿಕರ ಬೆಳಗಿನ ಉಪಹಾರಕ್ಕೆ ರೂ. 30 ಲಕ್ಷ, ರಸ್ತೆ ಚರಂಡಿ ದುರಸ್ತೆ ನಿರ್ವಹಣೆಗೆ ರೂ. 155 ಲಕ್ಷ, ಪಟ್ಟಣದ ಸಮಗ್ರ ಅಭಿವೃದ್ದಿಗೆ ರೂ. 13.95 ಕೋಟಿ, ಭೂಸ್ವಾಧೀನಕ್ಕಾಗಿ ರೂ. 50 ಲಕ್ಷ, ರಸ್ತೆ, ಚರಂಡಿ, ನಾಮಫಲಕ ಅಳವಡಿಕೆಗೆ ರೂ. 3.90 ಕೋಟಿ, ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ 4.80 ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು. 

ಬಜೆಟ್ ಕುರಿತು ಮಾತನಾಡಿದ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಇದೊಂದು ನಿರಾಶಾದಾಯಕ ಬಜೆಟ್ ಆಗಿದ್ದು, ಕಳೆದ ಸಲ ಮಂಡಿಸಿದ ಬಜೆಟ್‍ನ ಝೆರಾಕ್ಸ್ ಪ್ರತಿಯಾಗಿದೆ. ಈ ಬಜೆಟ್ ಮೂಲಕ ಹೋದರೆ ಅಭಿವೃದ್ದಿ ಸಾಧ್ಯವಿಲ್ಲ. ನಗರದ 31 ವಾರ್ಡ್‍ಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿಲ್ಲದ ಬಜೆಟ್ ಇದಾಗಿದೆ. ಸ್ತ್ರೀಶಕ್ತಿ ಸಂಘಗಳ ಅಭಿವೃದ್ದಿಗೆ ಇನ್ನಷ್ಟು ಯೋಜನೆ ಘೋಷಣೆಯಾಗಬೇಕಾಗಿತ್ತು. ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸಮಸ್ಯೆ ಮುಕ್ತವಾಗಿಸಲು ಯೋಜನೆ ಬಜೆಟ್ ಹೊಂದಿಲ್ಲ. ಬಜೆಟ್ ಖುಷಿ ತಂದಿಲ್ಲ ಎಂದು ಹೇಳಿದರು.

ಬಿಜೆಪಿ ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಕಳೆದ ವರ್ಷ ವಸೂಲಾತಿ ವಿಭಾಗದಲ್ಲಿ ನಗರಸಭೆ ಕಂದಾಯ ವಿಭಾಗ ಅತಿಹೆಚ್ಚು ಸಾಧನೆ ಮಾಡಿತ್ತು. ಆದರೆ ಬಜೆಟ್‍ನಲ್ಲಿ ವಸೂಲಾತಿ ಕುರಿತು ಗಮನಾರ್ಹ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಕಟ್ಟಡ ಬಾಡಿಗೆ, ಮನೆ ಕಂದಾಯ, ನಳ ತೆರಿಗೆ ವಸೂಲಾತಿ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ಆಡಿಟ್ ವರದಿಯನ್ನು ಸದಸ್ಯರಿಗೆ ಎಲ್ಲ ಕೊಡಬೇಕು. ವಿವಿಧ ಸಮಿತಿಗಳನ್ನು ರಚಿಸಿ ಪರಿಶೀಲನೆ ನಡೆಸಬೇಕು. ಆದಾಯ ಸೋರಿ ಹೋಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ. ಇನ್ನುಳಿದಂತೆ ಬಜೆಟ್ ದೂರದರ್ಶಿತ್ವ ಹೊಂದಿದ್ದು, ಸಾಗರ ನಗರ ಅಭಿವೃದ್ದಿಗೆ ಪೂರಕವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಲಲಿತಮ್ಮ, ವಿ.ಶಂಕರ್, ಗಣೇಶ ಪ್ರಸಾದ್, ತಸ್ರೀಫ್ ಇನ್ನಿತರರು ಮಾತನಾಡಿದರು. ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ಹಿರಿಯ ಲೆಕ್ಕಾಧಿಕಾರಿ ರಾಮಚಂದ್ರ ಸಾಗರ್ ಇನ್ನಿತÀರು ಹಾಜರಿದ್ದರು. 

Leave a Reply

Your email address will not be published. Required fields are marked *