google.com, pub-9939191130407836, DIRECT, f08c47fec0942fa0

ಬೆಂಗಳೂರು :- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಜನೌಷಧಿ ಆಶಯವನ್ನು ಉಳಿಸಿ ಎಂದು ಇಂದಿನ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳೂ ಆದ ಡಿ.ಎಸ್. ಅರುಣ್‌ರವರು ಮನವಿ ಮಾಡಿದರು.

ಶಿವಮೊಗ್ಗದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಇತರೆ ಔಷಧಿ ಮತ್ತು ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಕುರಿತು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶಿವಮೊಗ್ಗದ ಜನ ಔಷಧಿ ಕೇಂದ್ರದಲ್ಲಿ ಇತರೆ ಔಷಧಿಗಳು ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ ಔಷಧಿ ವ್ಯಾಪಾರಗಳ ಸಂಘ ಹಾಗೂ ಜನೌಷಧಿ ವ್ಯಾಪಾರಗಳು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪಿಸಿ ಕೊಳ್ಳುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಪರಿಹಾರ ಕಲ್ಪಿಸಿಕೊಡಬೇಕು ಹಾಗೂ ಜನೌಷಧಿ ಕೇಂದ್ರಗಳನ್ನು ನಂಬಿ ಔಷಧಿ ಖರೀದಿಸುವ ಸಾಮಾನ್ಯರಿಗೆ ನ್ಯಾಯ ಒದಗಿಸಬೇಕೆಂದು ಪ್ರಸ್ತಾಪಿಸಿದರು.

ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ಪ್ರಮುಖ ಉದ್ದೇಶವೆಂದರೆ ಗುಣಮಟ್ಟ ದಲ್ಲಿ ಯಾವುದೇ ರಾಜಿ ಇಲ್ಲದೆ, ಬ್ರ್ಯಾಂಡ್ ಔಷಧಿಗಳಿಗಿಂತ ತುಂಬಾ ಕಡಿಮೆ ದರದಲ್ಲಿ ಬಡವರಿಗೆ ಹಾಗೂ ಅಗತ್ಯತೆ ಇರುವವರಿಗೆ ಸುಲಭವಾಗಿ ಔಷಧಿಗಳನ್ನು ಲಭ್ಯವಾಗಿಸುವುದೆ ಮೂಲ ಉದ್ದೇಶವಾಗಿರುತ್ತದೆ. ಕೇಂದ್ರ ಸರ್ಕಾರದ ಜನೌಷದಿ ಕೇಂದ್ರಗಳಲ್ಲಿ 2047 ವಿಧದ ಔಷಧಿಗಳು ಮತ್ತು 300 ಶಸ್ತ್ರ ಚಿಕಿತ್ಸೆ ವಸ್ತುಗಳು ಸಿಗುವಂತಿದ್ದು, ಕರ್ನಾಟಕ ರಾಜ್ಯದಲ್ಲಿ 950ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿದ್ದು, ಶಿವಮೊಗ್ಗ ನಗರದಲ್ಲಿ 14ಜನೌಷದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಶಿವಮೊಗ್ಗದ ಜನೌಷಧಿ ಕೇಂದ್ರಗಳು ಜನರಿಕ್ ಔಷಧಿಗಳನ್ನು ತಂದು ಜನೌಷಧಿ ಬೆಲೆಗೆ ಸಮಾನವಾಗಿ ೫-೧೦ರೂ ಲಾಭದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಬಿಪಿಪಿಎಐ ಸಂಸ್ಥೆ ಪಿಎಂಡಿಐ ರೂಪಾಂತರ ಹೊಂದಿ ನಿಯಮಾವಳಿಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿದ್ದು ಅದರಲ್ಲಿ ಜನರಿಕ್ ಔಷಧಿಗಳನ್ನು ಮಾರಬಾರದೆಂಬ ನಿಯಮವು ಸೇರಿದೆ, ಅದಾಗಿಯೂ ಜನ ಔಷಧಿ ಕೇಂದ್ರಗಳಲ್ಲಿ ಭಾರತೀಯ ಜನೌಷಧಿ ಪರಿ ಯೋಜನೆ ಮೊಹರಿಲ್ಲದೆ ಅಸಂಖ್ಯಾತ ಔಷಧಿಗಳನ್ನು ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದು, ಇದು ಜನ ಔಷಧಿ ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರದ ಜೊತೆ ಮಾಡಿಕೊಂಡ ಒಪ್ಪಂದ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ ಎಂದು ಮಾಹಿತಿ ನೀಡಿದರು.

ಜನೌಷಧಿ ಕೇಂದ್ರವನ್ನು ಪ್ರಾರಂಭ ದಲ್ಲಿ ಇದ್ದಂತೆ ಮೂಲ ರೂಪದಲ್ಲೇ ಉಳಿಸಿಕೊಳ್ಳಬೇಕು ಹಾಗೂ 2027ರ ಒಳಗೆ ದೇಶದಲ್ಲಿ ೨೫ಸಾವಿರ ಜನೌಷದಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿ,ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿ ಯಲ್ಲಿಯೇ ಜನೌಷಧಿಗಳು ಕಾರ್ಯ ನಿರ್ವಹಿಸುವಂತಾಗಬೇಕು. ನಿಯಮ ಬಾಹಿರವಾಗಿ ಜನೌಷದಿ ಕೇಂದ್ರಗಳಲ್ಲಿ ಜನರಿಕ್ ಔಷಧಿಗಳನ್ನು ತಂದು ಜನೌಷಧಿ ಬೆಲೆಗೆ ಮಾರಾಟ ಮಾಡು ತ್ತಿರುವ ಕುರಿತು, ರಾಜ್ಯ ಸರ್ಕಾರ ನಿಗಾವಹಿಸಿ ಎಲ್ಲಾ ಜನೌಷಧಿ ಕೇಂದ್ರಗಳ ಮೇಲೆ ರಾಜ್ಯದಲ್ಲಿ ನೋಡೆಲ್ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸಿ ಯಾರು ಜನ ಔಷಧಿ ಕೇಂದ್ರಗಳಲ್ಲಿ ಬೇರೆ ಔಷಧಿಗಳನ್ನು ಮಾರುತ್ತಿದ್ದಾರೋ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂದ್ ಮಾಡಿಸಲು ಆರೋಗ್ಯ ಸಚಿವರನ್ನು ಶಾಸಕ ಡಿ.ಎಸ್. ಅರುಣ್ ಒತ್ತಾಯಿಸಿದರು.

Leave a Reply

Your email address will not be published. Required fields are marked *