ಶಿವಮೊಗ್ಗ :- ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ ಎಂದು ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್‌ಕುಮಾರ್ ಹೇಳಿದರು.
ಅವರು ಬಿ.ಎಸ್.ಎಸ್. ಮೈಕ್ರೋ ಪೈನಾನ್ಸ್ ನಿಂದ ರಂಗಾಯಣ ಡ್ರಾಮಾ ಥೇಟರ್‌ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಿ.ಎಸ್.ಎಸ್. ಕಿರುಬಂಡವಾಳ ಸಂಸ್ಥೆಯು ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥೀವೇತನವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಮತ್ತು ಸಮಾಜಕ್ಕೆ ಮಾದರಿಯಾಗಿರಬೇಕು ಎಂದ ಅವರು, ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸಬಾರದು ಎಂದರು.
ಲೀಡ್ ಬ್ಯಾಂಕ್ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಉಳಿತಾಯ ಖಾತೆಯನ್ನು ತೆರೆಯುವುದರ ಮೂಲಕ ಹಣ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಬೇಕು. ಮತ್ತು ವಿದ್ಯಾರ್ಥಿವೇತನವು ವಿದ್ಯಾರ್ಥಿಯ ಶೈಕ್ಷಣಿಕ ಉನ್ನತಿಗೆ ಕಾರಣವಾಗುತ್ತದೆ ಎಂದರು.
ಮುಖ್ಯಸ್ಥರಾದ ರಘು ಎನ್.ಸಿ. ಮಾತನಾಡಿ, ಬಿ.ಎಸ್.ಎಸ್.ಸಂಸ್ಥೆಯು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡುತ್ತಿದೆ. ಮುಖ್ಯವಾಗಿ ಮಹಿಳೆಯರಿಗೆ ಅದರಲ್ಲೂ ಗ್ರಾಮೀಣ ಮಹಿಳೆಯರ ಸ್ವಾವಲಂಬಿಗೆ ಹೆಚ್ಚು ಶ್ರಮಿಸುತ್ತದೆ ಎಂದರು.
ಕೆನರಾ ಬ್ಯಾಂಕ್ ಮುಖ್ಯಸ್ಥ ಬಿ.ಆರ್.ಶಂಕರಪ್ಪ ಮಾತನಾಡಿ, ಬಿ.ಎಸ್.ಎಸ್.ಮೈಕ್ರೋಪೈನಾನ್ಸ್ ಬಡತನ ನಿರ್ಮೂಲನೆಗೆ ಆದ್ಯತೆ ಕೊಡುತ್ತಿದೆ. ಆರೋಗ್ಯ , ಶಿಕ್ಷಣ, ಹೈನುಗಾರಿಕೆಯ ಅಂಶಗಳನ್ನು ಇಟ್ಟುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯವಲ್ಲದೇ ಇತರ ರಾಜ್ಯಗಳ ಶಾಲೆಗಳ ಅಭಿವೃದ್ಧಿಗೂ ಕೂಡ ಸಹಾಯ ಮಾಡುತ್ತಿದೆ. ರಾಜ್ಯದ 15 ಜಿಲ್ಲೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಶಿವಮೊಗ್ಗದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ ಎಂದರು.
ಪ್ರಮುಖರಾದ ಪಂಡಿತ್ ಗಂಗಾಧರ್‌ಪಾಟೀಲ್, ಪ್ರಶಾಂತ್‌ಕುಮಾರ್, ಎಸ್.ಶಿವಲಿಂಗಶೆಟ್ಟಿ, ಜಗದೀಶ್ ಎನ್.ಎಲ್., ಗುರುಪ್ರಸಾದ್ ಎಂ.ಪಿ. ಶಶಿಕುಮಾರ್ ಎಂ., ಗಿರೀಧರ್ ಜೆ.ಎಸ್., ಮುಂತಾದವರು ಇದ್ದರು.
