ಸಾಗರ :- ಚತುಷ್ಪಥ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಹಾಗೂ ಅತ್ಯಂತ ಕಳಪೆಯಿಂದ ಕೂಡಿದೆ. ಕಳಪೆ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರ ದೂರುಗಳಿದ್ದಾಗ್ಯೂ ಚುನಾಯಿತ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಖಂಡನೀಯ ಎಂದು ಮಲೆನಾಡು ಭೂರಹಿತ ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸದರು, ಶಾಸಕರು, ನಗರಸಭೆ ಆಡಳಿತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತನಿಖೆಗೆ ಒಳಪಡಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿ ನಗರದ ತ್ಯಾಗರ್ತಿ ಕ್ರಾಸ್‍ನಿಂದ ಎಲ್.ಬಿ.ಕಾಲೇಜುವರೆಗೆ ಸುಮಾರು 65 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ. ಈಗಾಗಲೆ 15 ಕೋಟಿ ರೂ. ಭೂಸ್ವಾಧೀನ ಪರಿಹಾರ ನೀಡಿದ್ದು 50 ಕೋಟಿ ರೂ. ವೆಚ್ಚದಲ್ಲಿ ಡಾಂಬಾರೀಕರಣ ನಡೆಯುತ್ತಿದೆ. ಜುಲೈ 2024ಕ್ಕೆ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ಅವಧಿಯನ್ನು ಜುಲೈ 2025ಕ್ಕೆ ವಿಸ್ತರಿಸಲಾಗಿದ್ದು, ಕಾಮಗಾರಿ ಮುಗಿಯುವ ಸಾಧ್ಯತೆ ತೀರ ಕಡಿಮೆ. ಇದರ ಜೊತೆಗೆ ರಸ್ತೆ ನಿರ್ಮಾಣ ಮಾಡುವಾಗ ಒಂದೊಂದು ಕಡೆ ಒಂದೊಂದು ಅಳತೆಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬಿ.ಎಚ್.ರಸ್ತೆಯಿಂದ ಪೊಲೀಸ್ ಸ್ಟೇಷನ್ ವೃತ್ತದವರೆಗೆ ಎರಡೂ ಕಡೆಗಳಲ್ಲಿ ರಸ್ತೆಗೆ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದಿರುವ ನಿಯಮ ಮೀರಲಾಗಿದೆ. ಶ್ರೀಮಂತರಿಗೊಂದು, ಬಡವರಿಗೊಂದು ನೀತಿ ಅನುಸರಿಸುತ್ತಿದೆ. ತಕ್ಷಣ ಕಾಮಗಾರಿ ಪರಿಶೀಲನೆ ನಡೆಸಿ ಲೋಪವನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದೆ. ಸೊರಬ ರಸ್ತೆ ಅಗಲೀಕರಣ ನೆನಗುದಿಗೆ ಬಿದ್ದಿದೆ. ಮೀನು ಮಾರುಕಟ್ಟೆ ಕಾಮಗಾರಿ ಅರೆಬರೆಯಾಗಿದ್ದು ಕೆಲವರು ಮಳಿಗೆಯನ್ನು ಸಿಮೆಂಟ್ ಗೋದಾಮು ಮಾಡಿಕೊಂಡಿದ್ದಾರೆ. ಈಜುಕೊಳ ಕಾಮಗಾರಿ ಕಳಪೆಯಾಗಿದ್ದು ಈತನಕ ರಿಪೇರಿ ಮಾಡಿಲ್ಲ. ಒಳಚರಂಡಿ ಕಾಮಗಾರಿ ಈತನಕ ಮುಗಿಸಿಲ್ಲ. ಒಟ್ಟಾರೆ ಪರಿಣಾವiಕಾರಿ ಕೆಲಸ ನಡೆಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಕಳಪೆ ಕಾಮಗಾರಿಗಳ ಕುರಿತು ಲೋಕಾಯುಕ್ತಕ್ಕೂ ದೂರು ನೀಡಲಾಗುತ್ತದೆ ಎಂದು ಹೇಳಿದರು.
ಬಿ.ಎಚ್.ರಸ್ತೆ ನಿವಾಸಿ ಹ್ಯಾರಿ ಫರ್ನಾಂಡಿಸ್ ಮಾತನಾಡಿದರು. ಗೋಷ್ಟಿಯಲ್ಲಿ ಫ್ರಾಂಕಿ ಲೋಬೋ, ಫ್ರಾಂಕಿ ಫರ್ನಾಂಡಿಸ್, ಮಂಜುನಾಥ್, ವಿಕ್ರಮ್ ಹಾಜರಿದ್ದರು.
