ಶಿವಮೊಗ್ಗ :- ಮಹಿಳೆಯರಿಗೆ ಭಾರತ ದೇಶದಲ್ಲಿ ಪೂಜನೀಯ ಸ್ಥಾನವಿದ್ದು, ಇತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ರಾರಾಜಿಸಿ, ಸಬಲೀಕರಣಗೊಳ್ಳುವತ್ತ ಸಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿವಮೊಗ್ಗದ ಸಿಡಿಪಿಒ ಗಂಗೂಬಾಯಿ ಹೇಳಿದ್ದಾರೆ.
ಸೋಮವಾರ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮಹಿಳಾ ಜಗೃತಿ ವೇದಿಕೆ, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್, ಹಿಂದುಳಿದ ಜನಜಗೃತಿ ವೇದಿಕೆ ಮಹಿಳಾ ಘಟಕ ಶಿವಮೊಗ್ಗ ಇವರ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಚೈತನ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹಿಂದೇ ಗಂಡಸರು ದುಡಿಯಬೇಕಿತ್ತು. ಹೆಂಗಸರು ಮನೆ ನಿರ್ವಹಣೆ ಮಾಡಬೇಕಿತ್ತು. ಈಗ ಹಾಗೆ ಇಲ್ಲ. ಎಲ್ಲಾ ಹಂತದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸಾಗುತ್ತಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಮಹಿಳೆಯರು ಮುನ್ನಗ್ಗುತ್ತಿದ್ದು, ಸಫಲತೆ ಕಾಣುತ್ತಿದ್ದಾರೆ ಎಂದರು.
ಯಾವ ಹೆಣ್ಣುಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗದಂತೆ ನೋಡುವುದು ನಮ್ಮೆಲ್ಲರ ಕರ್ತವ್ಯವವಾಗಿದೆ. ಮಹಿಳೆಯರು ಉನ್ನತ ಶಿಕ್ಷಣ ಪಡೆದಾಗ ಮಾತ್ರ ಆಡಳಿತಾತ್ಮಕ ನಿಲುವುಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ತಲುಪಿದಾಗ ಶಾಸನವನ್ನೇ ರಚಿಸುವಲ್ಲಿ ಸಾಧ್ಯವಾಗುತ್ತದೆ. ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಿದಲ್ಲಿ ದೇಶ ಕೂಡ ಅಭಿವೃದ್ಧಿಯಾಗುತ್ತದೆ. ಜೊತೆಗೆ ಪ್ರತಿ ಮಹಿಳೆ ತಮ್ಮ ಮಕ್ಕಳು ಹೆಣ್ಣಾಗಲಿ, ಗಂಡಾಗಲೀ ಉತ್ತಮ ನೈತಿಕ ಶಿಕ್ಷಣ ಹೇಳಿಕೊಡುವುದು ಕೂಡ ಮುಖ್ಯವಾಗುತ್ತದೆ ಎಂದರು.
ಹೆಣ್ಣಿಗೆ ಹೆಣ್ಣೇ ಶತ್ರುವಾಗಿದ್ದಾಳೆ. ಮನೆಗೆ ಬರುವ ಸೊಸೆಯನ್ನು ಮಗಳಂತೆ ಕಾಣಬೇಕು. ನಾನು ಜಿಲ್ಲಾ ಮಹಿಳಾ ಇಲಾಖೆಯಲ್ಲಿ ಅಧಿಕಾರಿಯಾಗಿ ಪ್ರತಿವರ್ಷ 70-80ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ವಿಷಾದನೀಯ. ಕಾಲ ಬದಲಾಗಿದೆ. ನಾವು ಕೂಡ ಬದಲಾಗಬೇಕು. ಪೊಲೀಸ್ ಠಾಣೆ ಮೆಟ್ಟಿಲೇರುವ ಮುನ್ನ ಹಿರಿಯರು ಕುಳಿತುಕೊಂಡು ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದಕ್ಕೂ ಮೊದಲು ಮುಖ್ಯವಾಗಿ ನಮ್ಮ ಹೆಣ್ಣು ಮಕ್ಕಳಿಗೆ ಮನೆ ಕೆಲಸ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಮನೆಯನ್ನೇ ಹೇಳಿಕೊಡಬೇಕು ಎಂದರು.
ಮಹಿಳಾ ಜಗೃತಿ ವೇದಿಕೆ ಸಂಚಾಲಕರಾದ ಎಸ್.ವಿ. ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರರಾದ ರಾಧಾ ಸುಂದರೇಶ್ ಮುಖ್ಯ ಭಾಷಣ ಮಾಡಿದರು.
ಅತಿಥಿಗಳಾಗಿ ದೀಪಿಕಾ ಯು., ವೀರಮ್ಮ, ಲತಾ ಜೋಯ್ಸ್ ಉಪಸ್ಥಿತರಿದ್ದರು.
