google.com, pub-9939191130407836, DIRECT, f08c47fec0942fa0

ಶಿವಮೊಗ್ಗ :-ಜಿಲ್ಲೆಯಲ್ಲಿ ಮಾ. 21 ರಿಂದ ಏ. 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿ.ಪಂ.ಸಿಇಓ ಹೇಮಂತ್ ಎನ್. ತಿಳಿಸಿದರು.

ಕುವೆಂಪು ರಂಗಮಂದಿರದಲ್ಲಿ ಮಾ. 17 ರಂದು ಪರೀಕ್ಷೆಗೆ ನಿಯೋಜಿತಗೊಂಡ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿಮಾ. 21 ರಿಂದ ಏ. 4 ರವರೆಗೆ ಜಿಲ್ಲೆಯ 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ. 23162 ರೆಗ್ಯುಲರ್, 266 ಪುನರಾವರ್ತಿತ, 439 ಖಾಸಗಿ ನೋಂದಾಯಿತ, 130 ಖಾಸಗಿ ಪುನರಾವರ್ತಿತ ಸೇರಿ ಒಟ್ಟು 23997 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸೂಕ್ತ ವ್ಯವಸ್ಥೆ ಇರುವುದನ್ನು ಬಿಇಓ ಗಳು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾe ಜರಿಗೊಳಿಸಿದ್ದು, ಯಾವುದೇ ಜೆರಾಕ್ಸ್ ಅಂಗಡಿಗಳು ಅಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಮೊಬೈಲ್ ಸೇರಿದಂತೆ ಯಾವುದೇ ರೀತಿಯ ವಿದ್ಯುನ್ಮಾನ ಉಪಕರಣಗಳಿಗೆ ಅವಕಾಶವಿರುವುದಿಲ್ಲ. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಓಆರ್‌ಎಸ್, ಪ್ರಥಮ ಚಿಕಿತ್ಸೆ ಕಿಟ್ ಇರಿಸಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಿಬ್ಬಂದಿ ಮತ್ತು ಜಗೃತ ದಳ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನಾವ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಪ್ರವೇಶ ಇರುವುದಿಲ್ಲ.ಜಿಲ್ಲೆಯಲ್ಲಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದು ಬರುತ್ತಿವೆ. ಈ ಬಾರಿಯ ಪರೀಕ್ಷೆಗಳು ಸಹ ಶಿಸ್ತಿನಿಂದ ಆಗಬೇಕು. ಕಳೆದ ವರ್ಷದಿಂದ ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್‌ನಲ್ಲಿ 3 ಹಂತದಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಈ ಬಾರಿ ಕೃತಕ ತಂತ್ರಜನ ಬಳಸಿ ಫೇಸ್ ಡಿಟೆಕ್ಷನ್ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕೊಠಡಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಹಾಗೂ ಪರೀಕ್ಷೆ ನಿಯೋಜಿತ ಅಧಿಕಾರಿಗಳು ಎಚ್ಚರಿಕೆಯಿಂದ ಪರೀಕ್ಷೆಗಳನ್ನು ನಡೆಸಬೇಕು ಎಂದ ಅವರು ಜಿಲ್ಲೆಯಲ್ಲಿ ಈ ಬಾರಿಯೂ ಉತ್ತಮ ಫಲಿತಾಂಶ ಲಭಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಥವಾ ಪರೀಕ್ಷೆ ಮುಂದೂಡಲಾಗಿದೆ ಎಂಬಂತಹ ಯಾವುದೇ ರೀತಿಯ ವದಂತಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಬದಲಿಗೆ ಪರೀಕ್ಷೆಗೆ ಸಜಗಿರಬೇಕು. ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಪರೀಕ್ಷೆ ಹಿಂದಿನ ದಿನ ಅಥವಾ ಬೆಳಿಗ್ಗೆ ಆಯಾಸವಾಗುವಂತಹ ಯಾವುದೇ ಕಾರ್ಯ ಮಾಡದೇ, ಪೌಷ್ಟಿಕವಾದ ಆಹಾರ ಸೇವಿಸಿ ಪರೀಕ್ಷೆಗೆ ಹಾಜರಾಗಬೇಕು. ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಬೇಕು. ಖಂಡಿತವಾಗಿ ಉತ್ತಮವಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸುತ್ತೀರ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ದೊರಕಲಿದೆ. ಪ್ರಯತ್ನ ಉತ್ತಮವಾಗಿರಲಿ. ಪೊಲೀಸ್ ಇಲಾಖೆ ವತಿಯಿಂದ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆ, ಪ್ರಶ್ನ ಪತ್ತಿಕೆ, ಉತ್ತರ ಪತ್ರಿಕೆ ಸಾಗಾಟಕ್ಕೆ ಸಹಕಾರ ಸೇರಿದಂತೆ ಅಗತ್ಯ ಸೇವೆ ನೀಡಲಾಗುವುದು ಎಂದ ಅವರು ಜಿಲ್ಲೆಯಲ್ಲಿ ಮಾದರಿಯಾಗಿ ಪರೀಕ್ಷೆ ನಡೆಸೋಣ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರುಗಳು ಮತ್ತು ಸಹಾಯ ಬೇಕಿದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ಮೊ. 9480803300 ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಡಿಡಿಪಿಐ ಮಂಜುನಾಥ್ ಮಾತನಾಡಿ, 79 ಸ್ಥಾನಿಕ ಜಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ 30 ಮಾರ್ಗಗಳಿಗೆ 30 ಜನ ಮಾರ್ಗಾಧಿಕಾರಿಗಳ ನೇಮಕ ಆಗಿದೆ. 79 ಮೊಬೈಲ್ ಸ್ವಾಧೀನಾಧಿಕಾರಿಗಳ ನೇಮಕ ಆಗಿದೆ. 30 ಅನ್ಯ ಇಲಾಖಾಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲು ಸಿದ್ದತೆ ಮಾಡಲಾಗಿದೆ. ಜಿ.ಪಂ. ಸಿಇಓ ರವರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತಮ ಫಲಿತಾಂಶ ಬರಲು ಸಾಕಷ್ಟು ಚಟುವಟಿಕೆಗಳನ್ನು ಮಾಡಿಸುತ್ತಿದ್ದಾರೆ. ಬಿಇಓ, ಶಿಕ್ಷಕರು ಸಹ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ದೂರದಿಂದ ಬರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆ ತರಲು ಉತ್ತಮ ವಾಹನ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಊಟ ಬಿಟ್ಟು ಓದುವುದು ಮಾಡದೇ, ಊಟ-ಉಪಹಾರ ಸೇವಿಸಿ ಪರೀಕ್ಷೆ ಬರೆಯಲು ಬರಬೇಕು. ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಎಲ್ಲ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಿರಿ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರಾಥಮಿಕ ಶಿಕ್ಷಣ)ರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಸಿಪ್ರಿಯನ್ ಮೊಂತೆಯೋ ಮಾತನಾಡಿ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಮೊಬೈಲ್ ಸ್ವಾಧಿನಾಧಿಕಾರಿ ಸೇರಿದಂತೆ ಎಲ್ಲ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ಶಾಂತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ದೂರದಿಂದ ಬರುವ ಮಕ್ಕಳ ಪಟ್ಟಿ ಮಾಡಿ, ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಕೋರಿದರು.

ಸಭೆಯಲ್ಲಿ ಡಯಟ್‌ನ ಪ್ರಾಂಶುಪಾಲರಾದ (ಪ್ರಭಾರ)ಡಾ.ಹರಿಪ್ರಸಾದ್ ಜಿ.ವಿ, ಜಿಲ್ಲಾ ಖಜನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *