ಶಿವಮೊಗ್ಗ :- ಹೊರಗುತ್ತಿಗೆ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಹಿತರಕ್ಷಣೆಗಾಗಿ ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ ಎಂಬ ಸಂಘ ರಚಿಸಿಕೊಂಡಿದ್ದು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಬೆಂಗಳೂರಿನ ಮಹಾಲಿಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ಶಿವಮೊಗ್ಗದ ಸುರೇಶ್ ಕೆ.ಬಾಳೆಗುಂಡಿ, ಮೈಸೂರಿನ ಎಂ. ನಾಗರಾಜು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ರಾಘವೇಂದ್ರ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಖಜಾಂಚಿಯಾಗಿ ದಾವಣಗೆರೆಯ ರಾಜಶೇಖರ್, ಜಂಟಿ ಕಾರ್ಯದರ್ಶಿಗಳಾಗಿ ಗುಲ್ಬರ್ಗದ ಯಲ್ಲಪ್ಪ, ಬೆಂಗಳೂರಿನ ದಯಾನಂದ, ಸಂಘಟನಾ ಕಾರ್ಯದರ್ಶಿಗಳಾಗಿ ಬೆಂಗಳೂರಿನ ಶಿವಕುಮಾರ, ರಾಜಪ್ಪ ಟಿ, ಗೋಪಾಲ, ಬಾಗಲಕೋಟೆಯ ಗಣಪತಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ಶಿವಮೊಗ್ಗದ ಗಿರಿಜಾ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹಲವರನ್ನು ಆಯ್ಕೆ ಮಾಡಲಾಗಿದೆ.
ಬೇಡಿಕೆಗಳೇನು : ಸರ್ಕಾರವು ಕೆ.ಟಿ.ಪಿ.ಪಿ ಕಾಯ್ದೆಯಂತೆ ಸಮರ್ಪಕ ವಾಗಿ ಟೆಂಡರ್‌ಗಳನ್ನು ಕಾಲಕಾಲಕ್ಕೆ ನಡೆಸಬೇಕು. ಇತ್ತೀಚಿನ ಕಾರ್ಮಿಕ ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೀದರ್ ಮಾದರಿಯ ವಿವಿಧೋದ್ದೇಶ ಸಹಕಾರಿ ಸಂಘವನ್ನು ಸ್ಥಾಪಿಸಬೇಕು. ಗುತ್ತಿಗೆ ಪಡೆಯುವ ಸಂಸ್ಥೆಗಳಿಗೆ ವೈಜ್ಞಾನಿಕ ಹಾಗೂ ನ್ಯಾಯ ಸಮ್ಮತ ಸೇವಾ ಶುಲ್ಕವನ್ನು ನೀಡಬೇಕು. ಸೇವಾ ಬಿಲ್ಲುಗಳನ್ನು ಪ್ರತಿ ಮಾಹೆ ಸಂಸ್ಥೆಗಳಿಗೆ ಬಿಡುಗಡೆಗೊಳಿಸುವುದು ಹಾಗೂ ಮರುಭರಣ ಪದ್ಧತಿಯನ್ನು ಜಾರಿಗೆ ತರಬೇಕು. ಟಿ.ಡಿ.ಎಸ್ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು. ಟಿ.ಡಿ.ಎಸ್ ಕೇವಲ ಸೇವಾ ಶುಲ್ಕಕ್ಕೆ ಮಾತ್ರ ಕಡಿತ ಗೊಳಿಸಿ ಆದಾಯ ತೆರಿಗೆ ಇಲಾಖೆಗೆ ಮೂಲ ಉದ್ಯೋಗದಾತರು ಪಾವತಿಸಲು ಕ್ರಮ ಕೈಗೊಳ್ಳಬೇಕು. ನೌಕರರ ಇ.ಪಿ.ಎಫ್ ಮತ್ತು ಇ.ಎಸ್.ಐಗಳನ್ನು ಸಕಾಲದಲ್ಲಿ ಪಾವತಿಸಲು ಅನುವಾಗಲು ಮೂಲ ಉದ್ಯೋಗದಾತರು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಕ್ಯಾಲೆಂಡರ್ ಮಾಹೆ ೫ ನೇ ತಾರೀಖಿನ ಒಳಗೆ ನೀಡಬೇಕು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಸರ್ಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ದತಿಯಲ್ಲಿ ನೇಮಕ ಮಾಡದ ಇಲಾಖೆಗಳಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಡಿ- ವೃಂದದ ಹುದ್ದೆಯಿಂದ ಆರಂಭಿಸಿ ಇಂಜಿನಿಯರ್, ವೈದ್ಯರು ಹಾಗೂ ಪಿ.ಹೆಚ್.ಡಿ ಪದವೀಧರರು ಸೇರಿದಂತೆ ವಿವಿಧ ವೃಂದದ ನೇಮಕಾತಿಗಳನ್ನು ಹೊರಗುತ್ತಿಗೆ ಪದ್ದತಿಯಲ್ಲಿ ಕಳೆದ ೧೫-೨೦ ವರ್ಷ ಗಳಿಂದ ಸರ್ಕಾರದ ವಿವಿಧ ಇಲಾಖೆ ಗಳು ಹೊರಗುತ್ತಿಗೆ ಸೇವೆಯನ್ನು ಪಡೆಯುತ್ತ ಬಂದಿರುತ್ತದೆ. ಸುಮಾರು ಒಂದು ಲಕ್ಷ ನೌಕರರು ನಿಯೋಜನೆಯನ್ನು ನೂರಕ್ಕೂ ಹೆಚ್ಚು ಸಂಸ್ಥೆಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡಿ ಕೊಂಡಿರುತ್ತವೆ.
ಇತ್ತೀಚಿನ ದಿನಗಳಲ್ಲಿ ಹೊರಗುತ್ತಿಗೆ ಪದ್ದತಿಯ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೆ ಗುತ್ತಿಗೆ ಸಂಸ್ಥೆಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ. ನ್ಯಾಯಯುತ ಬೇಡಿಕೆಗಳು ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಸಂಘಟಿತ ಹೋರಾಟ ಮಾಡಲು ಸಂಘವನ್ನು ನೋಂದಣಿ ಮಾಡಿಸಿದ್ದೇವೆ ಎಂದು ಸಂಘ ನೂತನ ರಾಜ್ಯ ಉಪಾಧ್ಯಕ್ಷ ಸುರೇಶ್ ಕೆ ಬಾಳೆಗುಂಡಿ ಅವರು ತಿಳಿಸಿದ್ದಾರೆ.
