ಸೊರಬ :- ನಾಡಿನ ಐತಿಹಾಸಿಕ ಪ್ರಸಿದ್ಧ ರೇಣುಕಾಂಬಾ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿ ಪ್ರಾಧಿಕಾರ ರಚನೆಗೆ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿದ್ದು, ದೇವಸ್ಥಾನ ದಲ್ಲಿರುವ 3ಕೋಟಿ ಅನುದಾನದ ಜೊತೆಗೆ ಹೆಚ್ಚುವರಿ ಅನುದಾನ ಬಳಸಿ 10ಎಕರೆ ಪ್ರದೇಶದಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಂದು ಪಟ್ಟಣದ ಬಂಗಾರ ಧಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿರುವುದರಿಂದ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಆಗಲಿದೆ, ದೇವಸ್ಥಾನದ ಅಭಿವೃದ್ಧಿಗೆ ಅನುದಾನ ತರಲು ಅವಕಾಶವಿದೆ. ರಾಜ್ಯದಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಜೊತೆಗೆ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರ ಸ್ಥಳವನ್ನಾಗಿ ರೂಪಿಸಲು ಮುಂದಿನ ಎರಡು ತಿಂಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಮೂಲ ಸೌಕರ್ಯಗಳ ಜೊತೆಗೆ ಕಲಿಕೆಗೆ ಆದ್ಯತೆ ನೀಡಿರುವುದು ಸ್ವಾಗರ್ತಾಹವಾಗಿದೆ. ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಗಳನ್ನು ಮುಂದುವರೆಸುವ ಮೂಲಕ ಎಲ್ಲಾ ವರ್ಗದ ಜನರಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ಗಾತ್ರ ವಿಸ್ತರಿಸಲಾಗಿದೆ ಎಂದರು.
ಶಾಲೆಗಳಲ್ಲಿಮಕ್ಕಳಿಗೆ ಓದು ಹಾಗೂ ಬರೆಯುವ ಬಗ್ಗೆ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಓದು ಕರ್ನಾಟಕ ಯೋಜನೆ ಜರಿಗೊಳಿಸಲಾಗಿದೆ. ಶಾಲೆಗೆ ಬೆಳಿಗ್ಗೆ ಹಾಜರಾಗಿ ಮಧ್ಯಾಹ್ನ ಗೈರಾಗುವ ಶಿಕ್ಷಕರ ಬಗ್ಗೆ ಮಾಹಿತಿ ಇರುವುದರಿಂದ ಶಾಲೆಯಲ್ಲಿ ಇರುವಂತೆ ಮೂರು ಹೊತ್ತು ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಕಡ್ಡಾಯ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಮಕ್ಕಳ ಕೊರತೆ ಇರುವ ಶಾಲೆಗಳನ್ನು ಸಮೀಪದ ಗ್ರಾಮದ ಶಾಲೆಗೆ ಸೇರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹಾಗೂ ಶಿಕ್ಷಣ ತಜ್ಞರ ಸಹಕಾರ ಪಡೆದು ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಕ್ಷಕರ ಕೊರತೆ ನೀಗಿಸಬಹುದಾಗಿದೆ. ಅಲ್ಲದೇ ವಿಲೀನಗೊಳಿಸುರುವ ಶಾಲೆಗೆ ಪ್ರತಿನಿತ್ಯ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ, ಮಹಿಳಾ ಘಟಕದ ಅಧ್ಯಕ್ಷೆ ಸುಜತಾ ಜೋತಾಡಿ, ಯುವ ಘಟಕದ ಅಧ್ಯಕ್ಷ ಪ್ರವೀಣ ಕುಮಾರ್, ಮುಖಂಡರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ,ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಗಣಪತಿ ಹುಲ್ತಿಕೊಪ್ಪ, ಎಂ.ಡಿ.ಶೇಖರ್, ಕೆ.ಪಿ.ರುದ್ರಗೌಡ, ಸುರೇಶ್ ಬಿಳವಾಣಿ, ರತ್ನಮ್ಮ, ಸುಲ್ತಾನಾ ಬೇಗಂ, ಭಾರತಿ ಭಂಡಾರಿ, ಸುಜಯತ್ ವುಲ್ಲಾ, ಆನಂದಪ್ಪ, ನೆಹರೂ ಕೊಡಕಣಿ, ರೂಪ ಮದು ಕೇಶ್ವರ, ಶ್ರೀಕಾಂತ್ ಚಿಕ್ಕಶಕುನ ಇದ್ದರು.
