
ಶಿವಮೊಗ್ಗ :- ಹೊರಗುತ್ತಿಗೆ ಪದ್ಧತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಜೀವನಾಂಶ ಹಾಗೂ ಉದ್ಯೋಗದ ಭದ್ರತೆ ನೀಡಿ ತಮಗೆ ಕುಟುಂಬ ನಿರ್ವಹಣೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ಸರ್ಕಾರವನ್ನು ಆಗ್ರಹಿಸಿ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಕಚೇರಿ ಎದುರು ಸೋಮವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಶಿವಮೊಗ್ಗ ಹಿಂದಿನ ನಗರಸಭೆ ಅಂದರೆ ಪ್ರಸ್ತುತ ಮಹಾನಗರಪಾಲಿಕೆಯಲ್ಲಿ ಸುಮಾರು 15-20 ವರ್ಷಗಳಿಂದ ಗುತ್ತಿಗೆ ಪದ್ಧತಿ ಅಡಿಯಲ್ಲಿ 116 ನೌಕರರಲ್ಲಿ ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಮೇಲಾಧಿಕಾರಿಗಳು ನೀಡಿದ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ಇಷ್ಟು ಸುಧೀರ್ಘ ಸೇವೆ ಸಲ್ಲಿಸಿದರೂ ನಮಗೆ ಯಾವುದೇ ಜೀವನಾಂಶ ಹಾಗೂ ಸೇವಾ ಭದ್ರತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ/ನೇರಪಾವತಿಯಡಿ ತರಲು ಆನೇಕ ಬಾರಿ ಮಾಹಿತಿಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶದವರಿಂದ ಮಾಹಿತಿಯನ್ನು ಪಡೆದಿದೆ. ಸದರಿ ಮಾಹಿತಿಯು ಕಡತಗಳಿಗೆಷ್ಟೆ ಸೀಮಿತವಾಗಿದೆ ಅರೋಪಿಸಿದ್ದಾರೆ.
ಇದರಿಂದಾಗಿ ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳಲ್ಲಿ ಬಿಬಿಎಂಪಿ ಹಾಗೂ ಮೈಸೂರು ಮಹಾನಗರಪಾಲಿಕೆ ಹೊರತು ಪಡಿಸಿ ಮನನೊಂದು ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ 2019-20ನೇ ಸಾಲಿನಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಅದರಂತೆ ಪ್ರಕರಣ ಸಂಖ್ಯೆ 162/2019ರಂತೆ ನ್ಯಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನ/ನೇರನೇಮಕಾತಿ ಮಾಡುವಂತೆ ಕೋರಿದನ್ವಯ ಘನ ನ್ಯಾಯಾಲಯವು ಸರ್ಕಾರದ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳುವಂತೆ ೮ ವಾರಗಳ ಗಡುವು ನೀಡಿ ದಿ.04.07.2013ರಲ್ಲಿ ಆದೇಶವನ್ನು ಹೊರಡಿಸಿರುತ್ತದೆ. ಆದಾಗ್ಯೂ ಸರ್ಕಾರವು ಯಾವುದೇ ರೀತಿಯ ಕ್ರಮಕೈಗೊಳ್ಳಲಿಲ್ಲ. ನಾವು ಮೇಲ್ಮನವಿ ಸಲ್ಲಿಸಿದ ನಂತರದಲ್ಲಿ ಸರ್ಕಾರವು ತರಾತುರಿಯಲ್ಲಿ ನಮಗೆ ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲಾ ಹೊರಗುತ್ತಿಗೆ ನೀರು ಸರಬರಾಜು ನೌಕರರನ್ನು ಕನಿಷ್ಠ ವೇತನ ಕಾಯ್ದೆಯಂತೆ ವೇತನ ಪಾವತಿಸಿ ಯಥಾಸ್ಥಿತಿ ಮುಂದುವರೆಸುವಂತೆ ಹಿಂಬರಹ ನೀಡಿರುತ್ತಾರೆ.
ಇದರಿಂದಾಗಿ ನಮಗೆ ಕಾನೂನು ರೀತಿಯ ಹೋರಾಟಕ್ಕೆ ಹಿನ್ನಡೆಯಾಗಿದ್ದು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಸಂಬಂಧ ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ಸಂಘವು ಇಂದಿನಿಂದ ರಾಜದ್ಯಂತ ನೀರು ಸರಬರಾಜು ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಬೆಂಬಲಿಸಿದ್ದ ಈ ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ ಮೋಹನಕುಮಾರ್, ಅಧ್ಯಕ್ಷ ನಾಗರಾಜ್ ಎಚ್.ಎನ್. ರಘುರಾಮ್, ಕಿರಣ್ ಕುಮಾರ್ ಡಿ.ಎನ್. ವಿನಯ್ ಜೆ. ರಘು ಎಲ್. ಪರಮೇಶ್ ಆರ್, ವಿನಾಯಕ ಎಲ್. ಮತ್ತಿತರರು ಪ್ರತಿಭಟನೆಯಲ್ಲಿದ್ದರು.
