
ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಇಂದು ಆಗ್ರಹಿಸಿದರು.
ಅಬಕಾರಿ ಇಲಾಖೆಯಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿವೆ. ಒಂದು ಲೈಸೆನ್ಸ್ ಪಡೆಯಲು ೫೦ರಿಂದ 60 ಲಕ್ಷ ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೇ ಅಧಿಕಾರಿಗಳು ಲೈಸೆನ್ಸ್ ನೀಡುತ್ತಾರೆ. ಒಂದು ಅಂದಾಜಿನ ಪ್ರಕಾರ ಈ ರೀತಿಯ ಲೈಸೆನ್ಸ್ ನಿಂದ ಜಿಲ್ಲೆಯಲ್ಲಿ ಸುಮಾರು 20 ಕೋಟಿ. ರೂ. ಗೂ ಹೆಚ್ಚು ಅವ್ಯವಹಾರವಾಗಿದೆ ಎಂದು ತಿಳಿದು ಬಂದಿದೆ ಎಂದರು.

ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂಗಡಿ, ಹೊಸನಗರ ತಾಲೂಕಿನ ಕೋಣಂದೂರು ಮುಖ್ಯ ರಸ್ತೆಯ ಮಸೀದಿ ಮುಂದೆಯೇ ಇರುವ ಅಂಗಡಿ, ಹೊಳೆಬೆನವಳ್ಳಿ, ಶಿವಮೊಗ್ಗದ ಕೆಲವು ಕಡೆ, ಸಾಗರದಲ್ಲಿ, ಹೀಗೆ ಇಡೀ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. ಇವೆಲ್ಲವೂ ನಿಯಮಬಾಹಿರವಾಗಿವೆ ಎಂದು ಆರೋಪಿಸಿದರು.
ಆದ್ದರಿಂದ ಹಲವಾರು ವರ್ಷಗಳಿಂದ ಶಿವಮೊಗ್ಗ ಕಚೇರಿಯಲ್ಲೇ ಠಿಕಾಣಿ ಹೂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಚಂದ್ರಪ್ಪ ಜೋಗಿ, ಎಂ. ಏಳುಕೋಟಿ, ರಮೇಶ್ ಚಿಕ್ಕಮರಡಿ, ಬೊಮ್ಮನಕಟ್ಟೆ ಕೃಷ್ಣ, ನಾಗರಾಜ್, ಹರಿಗೆ ರವಿ, ಯಡವಾಲ ಹನುಮಂತಪ್ಪ ಇದ್ದರು.
