ಶಿವಮೊಗ್ಗ :- ನಗರದ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪರಿಷತ್ಕಟ್ಟಡದ ಮುಂದುವರೆದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡುವುದರ ಜೊತೆಗೆ ವೈಯಕ್ತಿಕವಾಗಿ 5ಲಕ್ಷ ರೂ.ಗಳನ್ನು ಪರಿಷತ್ಚಟುವಟಿಕೆಗಳಿಗಾಗಿ ನೀಡಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಗ್ರಾಮ ಚಾಲುಕ್ಯ ನಗರದಲ್ಲಿ ಏರ್ಪಡಿಸಿದ್ದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ಕಟ್ಟಡದ ನೀಲನಕ್ಷೆಯನ್ನು ಉದ್ಘಾಟಿಸಿದ ನಂತರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕನ್ನಡಿಗರ ಹೆಮ್ಮೆಯ ಅಸ್ಮಿತತೆಯ ಪ್ರತೀಕವಾಗಿರುವ ಹಾಗೂ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ಕನ್ನಡದ ಉಳಿವು, ವಿಕಾಸದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅದಕ್ಕಾಗಿ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದ ಅವರು, ಕನ್ನಡದ ನೆಲ, ಜಲ. ಭಾಷೆಯ ಉಳಿವು ವಿಕಾಸದ ಕಾರ್ಯಕ್ರಮಗಳು ಮುಂದುವರೆಯಲಿ ಎಂದರು.
ಈ ನೆಲದ ಶ್ರೀಮಂತ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಜನಪದ ಮತ್ತಿತರ ಎಲ್ಲಾ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಿದೆ. ವಿಶೇಷವಾಗಿ ಕನ್ನಡದ ಪ್ರತಿ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಮೈದಳೆಯಬೇಕು. ನಾನೂ ಓರ್ವ ಕನ್ನಡಿಗನೆಂಬ ಹೆಮ್ಮೆ ನನಗಿದೆ. ಆ ಭಾಷಾಭಿಮಾನವನ್ನು ಯಾರೂ ನನ್ನಿಂದ ಅಳಿಸಲಾಗದು ಎಂದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ ಆದರೂ ಕನ್ನಡ ಕಲಿಕೆ ಕಡ್ಡಾಯವಾಗಿರಲಿದೆ. ಕನ್ನಡ ಮಾಧ್ಯಮ ನಿರಂತರವಾಗಿರಲಿದೆ. ಜಿಲ್ಲೆಯ ಹಿರಿಯ ಸಾಹಿತಿ ನಾ.ಡಿಸೋಜ ಅವರು ಭಾಷೆಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರನ್ನು ನೆನೆಯವುದು ಎಲ್ಲರ ಕರ್ತವ್ಯವಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರವು ಎಲ್ಲ ರೀತಿಯ ನೆರವು ಸಹಕಾರವನ್ನು ನೀಡಲಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ನಟಸಾರ್ವಭೌಮ ಡಾ|| ರಾಜ್ಕುಮಾರ್ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದನ್ನು ನೆನಪಿಸಿಕೊಂಡರು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.
ಜನಮನ ಸೂರೆಗೊಂಡ ಶಿವಮೊಗ್ಗ ನಾಗರಾಜ್ ಛಾಯಾಚಿತ್ರಗಳು…

ಶಿವಮೊಗ್ಗ ನಗರದ ಗೋಪಾಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವನ್ಯಜೀವಿ ಮತ್ತು ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ವನ್ಯಜೀವಿ, ಗ್ರಾಮೀಣ ಬದುಕು ಮತ್ತು ಜನಜೀವನ ಕುರಿತ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ನೋಡುಗರ ಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಛಾಯಾಚಿತ್ರ ವೀಕ್ಷಿಸಿದರು. ಖ್ಯಾತ ನಿರ್ಧೇಶಕ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ, ಸಮ್ಮೇಳನಾಧ್ಯಕ್ಷ ಡಾ. ಜೆ.ಕೆ. ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹಾಗೂ ಡಿ.ಬಿ. ಚಂದ್ರೇಗೌಡ ಇನ್ನಿತರರಿದ್ದರು.
