ಶಿವಮೊಗ್ಗ :- ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆಯೋ ಅದೇ ವಿದ್ಯೆ. ವಿದ್ಯೆಯ ವಿಧಾನ ಭಾರತೀಯವಾಗಿರಬೇಕು ಎಂದು ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಮಹಾಸ್ವಾಮೀಜಿ ಹೇಳಿದ್ದಾರೆ.
ಅವರು ಅಲ್ಲಮಪ್ರಭು ಉದ್ಯಾನವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕರ್ನಾಟಕ ದಕ್ಷಿಣ ಪ್ರಾಂತದ ೪೪ನೇ ಸಮ್ಮೇಳನದಲ್ಲಿ ಪ್ರದರ್ಶಿನಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಾನು ಮಾಡುತ್ತಿದ್ದೇನೆ. ನಾನು ಮಾಡಿದ ಕಾರ್ಯಕ್ಕೆ ಫಲ ಬೇಕು ಎನ್ನುವ ಅಪೇಕ್ಷೆ ಅದು ಸ್ವಾರ್ಥವಾಗುತ್ತದೆ. ನಾನು ಅಡಿಗೆ ಮಾಡಿದ್ದನ್ನು ಎಲ್ಲರಿಗೂ ಹಂಚಿ ತಿನ್ನಬೇಕು. ಬಹುಪಾಲು ಇತರರಿಗೆ ನೀಡಬೇಕು ಎನ್ನುವ ಭಾವನೆ ಇದ್ದರೆ ಅದು ಆತನ ಮುಂದಿನ ಭವಿಷ್ಯಕ್ಕೆ ಒಳ್ಳೆಯ ಫಲ ನೀಡುತ್ತದೆ. ಸಮಷ್ಠಿ ರೂಪದಲ್ಲಿ ಒಂದು ಧರ್ಮ ಇರಬೇಕು ಅನ್ನುತ್ತೇವೆ. ಎಲ್ಲರ ಪೋಷಣೆಯೇ ಸಮಷ್ಠಿ ಧರ್ಮದ ಲಕ್ಷಣ ಎಂದರು.
ಪ್ರತಿಯೊಬ್ಬ ಗೃಹಸ್ಥ ಜೀವಿತಾವಧಿಯಲ್ಲಿ ೫ ಯಜ್ಞಗಳನ್ನು ಮಾಡಬೇಕು. ದೇವತೆಗಳ ಆರಾಧನೆಯ ಮೂಲಕ ಸೇವೆಯ ಮೂಲಕ ದೇವತಾ ಯಜ್ಞ, ನಂತರ ಪಿತೃ ಯಜ್ಞ, ಭೂತ ಯಜ್ಞ, ಮನುಷ್ಯ ಯಜ್ಞ ಕೊನೆಯದಾಗಿ ಬ್ರಹ್ಮ ಯಜ್ಞ ಮಾಡಬೇಕು. ನಾವು ಗಳಿಸಿದ್ದನ್ನು ಇತರರಿಗೆ ಹಂಚುವುದು, ನಾವು ಕಲಿತದ್ದನ್ನು ಇತರರಿಗೆ ನೀಡುವುದು ಎಲ್ಲವನ್ನೂ ಯಜ್ಞ ಎಂದು ಭಾವಿಸಿ ಬಾಳಬೇಕು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವೆಲ್ಲವನ್ನೂ ವಿದ್ಯಾರ್ಥಿ ಜೀವನದಲ್ಲೇ ಹೇಳಿಕೊಡುತ್ತದೆ. ಮನುಷ್ಯ ಇವೆಲ್ಲವನ್ನೂ ತಿರಸ್ಕಾರ ಮಾಡುತ್ತಾ ಬಂದಾಗ ನಾನಾ ರೀತಿಯ ವಿಕೋಪಗಳು ಸಂಭವಿಸುತ್ತವೆ. ಪ್ರಾಕೃತಿಕ ವಿಕೋಪಗಳಾಗುತ್ತವೆ. ಈಗಿನ ಶಿಕ್ಷಣದಲ್ಲಿ ಗುಣಮಟ್ಟದ ಕೊರತೆಯಾಗುತ್ತಿದೆ. ಈ ಐದು ಯಜ್ಞಗಳನ್ನು ಅಳವಡಿಸುವುದರಿಂದ ಮತ್ತು ಗೃಹಸ್ಥಾಶ್ರಮದಲ್ಲಿ ಇದನ್ನು ಪಾಲನೆ ಮಾಡುವುದರಿಂದ ಜೀವನದಲ್ಲಿ ಯಶಸ್ವಿ ಕಾಣುವುದಲ್ಲದೇ ತನ್ಮೂಲಕ ರಾಷ್ಟ್ರಸೇವೆ ಮಾಡಿದಂತಾಗುತ್ತದೆ ಎಂದರು.
ವೇದಿಕೆಯಲ್ಲಿ ಡಾ. ಸತೀಶ್, ರಾಜ್ಯ ಕಾರ್ಯದರ್ಶಿ ಪ್ರವೀಣ್, ಪ್ರಮುಖರಾದ ಡಾ.ಪಿ.ವಿ. ಕೃಷ್ಣಭಟ್, ಕೆ.ಎಸ್. ಈಶ್ವರಪ್ಪ, ಗಿರೀಶ್ ಪಟೇಲ್, ಕೆ.ಇ. ಕಾಂತೇಶ್, ವಿ.ಹೆಚ್.ಪಿ. ಜಿಲ್ಲಾಧ್ಯಕ್ಷ ವಾಸುದೇವ್, ಬಾಲಕೃಷ್ಣ ಎಸ್., ಡಾ. ರವಿಕಿರಣ್, ದಿವೇಕರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರಸ್ವಾಮಿ ಮೊದಲಾದವರಿದ್ದರು.