ಶಿವಮೊಗ್ಗ :- ಸರ್ಕಾರಿ ಶಾಲೆಗಳಿಗೀಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಅಭಿವೃದ್ಧಿಯತ್ತ ಕೊಂಡೊಯ್ಯಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆಗೆ ಸಿಹಿ ಸುದ್ದಿಗಳು ಬರತೊಡಗಿವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ) ನಿಂದ ದೀರ್ಘಾವಧಿ ಸಾಲದ ರೂಪದಲ್ಲಿ 2 ಸಾವಿರ ಕೋಟಿ ರೂ. ಪಡೆಯಲಾಗುತ್ತಿದೆ. ಇದರ ಜೊತೆಗೆ ಸರ್ಕಾರದಿಂದ 500 ಕೋಟಿ ರೂ. ಸೇರಿಸಿ ಎರಡೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಸುಮಾರು 450ಕ್ಕೂ ಅಧಿಕ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಸುತ್ತಮುತ್ತಲ ಹಳ್ಳಿಗಳ ಶಾಲೆಗಳು ಕೂಡ ಈ ಶಾಲೆಗೆ ವಿಲೀನಗೊಳ್ಳುತ್ತವೆ ಎಂದರು.
ಆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸಲಾಗುವುದು. ಬಹಳಷ್ಟು ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಅವುಗಳನ್ನು ಆಟದ ಮೈದಾನ, ಶಾಲೆಗಳಿಗೆ ಮೂಲಭೂತ ವ್ಯವಸ್ಥೆ, ನೀರಿನ ಸಂಪರ್ಕ ಮಾಡಲಾಗುತ್ತಿದೆ. ಸರ್ಕಾರ ಶಾಲೆಗಳಿಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿರುವುದರಿಂದ ಸಂಜೆ ವಿಶೇಷ ತರಗತಿಗಳನ್ನು ನಡೆಸಲು ಸಹಾಯಕವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಲು ಇದು ಕಾರಣವಾಗುತ್ತದೆ ಎಂದರು.
ಈಗಾಗಲೇ ಸರ್ಕಾರದ ವತಿಯಿಂದ ಅನೇಕ ಕಡೆ ಸಿಇಟಿ ಹಾಗೂ ನೀಟ್ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಸುಮಾರು 16 ಜಿಲ್ಲೆಗಳಲ್ಲಿ ಈ ತರಗತಿ ನಡೆಸಲಾಗುತ್ತಿದ್ದು, ಇದನ್ನು ರಾಜದ್ಯಂತ ವಿಸ್ತರಿಸಲಾಗುವುದು ಎಂದರು.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯುಕೆಜಿ ತರಗತಿಗಳನ್ನು ಈಗಾಗಲೇ ಎಸ್.ಡಿ.ಎಂ.ಸಿ. ಸಹಕಾರದಲ್ಲಿ ತೆರೆಯಲಾಗುತ್ತಿದೆ. ಇದರಿಂದ ಶಾಲಾ ಪ್ರವೇಶಾತಿ ಹೆಚ್ಚಾಗುತ್ತದೆ. ಸರ್ಕಾರಿ ಶಾಲೆಗಳ ಉಳಿವಿಗೂ ಇದು ಕಾರಣವಾಗುತ್ತದೆ ಎಂದರು.
ಮುಂದಿನ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಇನ್ನೂ ಹೆಚ್ಚಿನ ಹಣದ ನಿರೀಕ್ಷೆಯಲ್ಲಿ ನಾನಿದ್ದೇನೆ. ಇನ್ನೂ 3-4 ವರ್ಷಗಳಲ್ಲಿ ರಾಜ್ಯದ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಬದಲಾಗಲಿದ್ದು, ಹೊಸ ಸಂಚಲನ ಉಂಟಾಗಲಿದೆ. ಈಗಾಗಲೇ ಶಿಕ್ಷಣ ಇಲಾಖೆಯಿಂದ ಹಲವು ಕಾರ್ಯಕ್ರಮ ಜರಿಯಲ್ಲಿವೆ. ನಲಿ -ಕಲಿ, ಗಣೀತ Uಣ ಚಿಲಿಪಿಲಿ ಮುಂತಾದವುಗಳಿಗೆ ಕಲಿಕೆಯ ಜೊತೆಗೆ ಸಂವಹನವನ್ನೂ ಮಕ್ಕಳಿಗೆ ಕಲಿಸಲಾಗುವುದು. ಇದರಿಂದ ಖಾಸಗಿ ಉದ್ಯೋಗಗಳನ್ನು ಅನುಕೂಲವಾಗುತ್ತದೆ. ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ತಾಲೂಕು ಮಟ್ಟದ ಶೈಕ್ಷಣಿಕ ಸಮಿತಿ ರಚಿಸಲಾಗಿದ್ದು, ಇದರ ಮೇಲ್ವಿಚಾರಣೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡ ನೋಡಿಕೊಳ್ಳುವ ವ್ಯವಸ್ಥೆ ಜರಿಗೆ ತರಲಾಗುವುದು ಎಂದರು.
ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ಶಾಲೆಯ ಪ್ರಾರಂಭದಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಸಂಘ, ಸಂಸ್ಥೆಗಳು ದಾನಿಗಳು, ಪೋಷಕರು, ಎಸ್.ಡಿ.ಎಂ.ಸಿ. ಸಮಿತಿ ಹೀಗೆ ಎಲ್ಲರ ಸಹಕಾರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ ಶ್ರಮಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಸಂಸದ ಆಯನೂರು ಮಂಜುನಾಥ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಸ್.ಟಿ. ಹಾಲಪ್ಪ, ವೈ.ಹೆಚ್. ನಾಗರಾಜ್, ಕಲೀಂವುಲ್ಲಾ, ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಯು. ಶಿವಾನಂದ್, ಶಿ.ಜು. ಪಾಶಾ ಇನ್ನಿತರರಿದ್ದರು.
