ಶಿವಮೊಗ್ಗ :- ನಗರದ ಪ್ರಖ್ಯಾತ ಚಿನ್ನ-ಬೆಳ್ಳಿ ವರ್ತಕರು, ಗಾಂಧಿ ಬಜಾರ್ ನ ಶ್ರೀ ಗಣೇಶ ಜ್ಯುವೆಲ್ಲರಿ ಹಾಗೂ ಎಂಜಿ ಪ್ಯಾಲೆಸ್ ಮಾಲೀಕರು ಆಗಿದ್ದ ಶ್ರೀಯುತ ಗಣೇಶ ವಾಸುದೇವ ಶೇಟ್ (88) ಅವರು ಇಂದು ಸಂಜೆ ರವೀಂದ್ರನಗರ ೬ನೇ ತಿರುವಿನ ತಮ್ಮ ನಿವಾಸದಲ್ಲಿ ನಿಧನರಾದರು.
ಮೃತರು ಈರ್ವ ಪುತ್ರರು, ಎಂಟು ಜನ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಮಾರು ೬ದಶಕಗಳ ಕಾಲ ಚಿನ್ನ-ಬೆಳ್ಳಿ ಉದ್ಯಮದಲ್ಲಿ ಸೇವೆ ಸಲ್ಲಿಸಿ ಖ್ಯಾತ ಪಡೆದಿದ್ದ ಶ್ರೀಯುತರು ದೈವಜ್ಞ ಕಲ್ಯಾಣ ಮಂದಿರದ ಸ್ಥಾಪಕರಲ್ಲೋರ್ವರು. ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಶ್ರೀ ಕಾಳಿಕ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಚಿನ್ನ ಬೆಳ್ಳಿ ಮತ್ತು ಗಿರವಿ ವರ್ತಕರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಶ್ರೀಯುತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ ಮತ್ತು ಪಾದಾಧಿಕಾರಿಗಳು ಹಾಗೂ ಶಿವಮೊಗ್ಗ ಚಿನ್ನಿ ಬೆಳ್ಳಿ ಗಿರವಿ ವರ್ತಕರ ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಜೈನ್ ಮತ್ತು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಜ 31ರ ನಾಳೆ ಮಧ್ಯಾಹ್ನ 1.30ಕ್ಕೆ ರೋಟರಿ ಚಿತಾಗಾರದಲ್ಲಿ ಜರುಗಲಿದೆ.
