ಶಿವಮೊಗ್ಗ :- ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ನಿನ್ನೆಯಿಂದ (ಶುಕ್ರವಾರ) ಶುರುವಾಗಿರುವ ಕರಕುಶಲ ಪ್ರದರ್ಶನ ಮತ್ತು ಫಲ-ಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು ಭಾಗವಹಿಸಿ ವೀಕ್ಷಿಸುತ್ತಿದ್ದಾರೆ.

ಒಂದು ಕಡೆ ಅತ್ಯಂತ ಆಕರ್ಷಿತವಾಗಿ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಜನ ಜಂಗುಳಿಯಿಂದ ಫ್ರೀಡಂ ಫಾರ್ಕ್ ದೂಳುಮಯವಾಗಿದೆ. ವಾರಾಂತ್ಯವಾದ ಶನಿವಾರ ಸಂಜೆಯಿಂದಲೇ ಸಾವಿರಾರು ಜನ ಜಮಾಯಿಸಿದ್ದಾರೆ. ಕಾಲಿಡಲು ಜಾಗವಿಲ್ಲದಂತೆ ವಾಹನಗಳು ಮತ್ತು ಸಾರ್ವಜನಿಕರು ತುಂಬಿ ತುಳುಕುತ್ತಿದ್ದಾರೆ.
ಇದರಿಂದಾಗಿ ಫ್ರೀಡಂ ಪಾರ್ಕ್ ಹೊರಗಿನ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಇದುವರೆಗೆ ಪ್ರತೀ ವರ್ಷ ಗಾಂಧಿ ಪಾರ್ಕ್‌ನ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವು ಇದೀಗ ಮೊದಲ ಭಾರಿಗೆ ಅಲ್ಲಮಪ್ರಭು ಪಾರ್ಕ್ (ಫ್ರೀಡಂ ಪಾರ್ಕ್) ನಲ್ಲಿ ಆಯೋಜನೆ ಮಾಡಲಾಗಿದೆ. ಈ ಭಾರಿ ಪ್ರವೇಶ ಉಚಿತವಾಗಿರುವುದೂ ಕೂಡ ಜನ ಜಂಗುಳಿಗೆ ಕಾರಣವಾಗಿದೆ.
ಶುಕ್ರವಾರ ಇದಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಫಲ ಪುಷ್ಪ ಪ್ರದರ್ಶನ ಮತ್ತು ಕರಕುಶಲ ಮಾರಾಟವನ್ನು ವೀಕ್ಷಿಸಿದರು. ಸಂಜೆ ವೇಳೆಗೆ ಜನರ ಆಗಮನ ಹೆಚ್ಚಾಯಿತು. ಇಷ್ಟರಮಟ್ಟಿಗೆ ಸಾರ್ವಜನಿಕರು ಭಾಗವಹಿಸುವರೆಂದು ಯಾರೂ ಕೂಡ ಊಯಿಸಿರಲಿಲ್ಲ. ಒಟ್ಟಾರೆ ಫಲಪುಷ್ಪ ಪ್ರದರ್ಶನಕ್ಕೆ ಇಷ್ಟೊಂದು ಜನ ಸೇರಿರುವುದು ವಿಶೇಷ, ಜೊತೆಗೆ ದೂಳೋ ದೂಳು…
