
ಶಿವಮೊಗ್ಗ: ಸಂತರು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತ ಬರುತ್ತಿರುವುದರಿಂದ ಇತರೆ ಎಲ್ಲಾ ದೇಶಗಳಿಗಿಂತ ಭಾರತ ದೇಶ ಸಧೃಡವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಹಾರನಹಳ್ಳಿ ಶ್ರೀ ಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠ ದಲ್ಲಿ ಹಮ್ಮಿಕೊಂಡಿದ್ದ ಹರಪುರಧೀಶನ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ರಂತಹ ಸಂತರು ನಮ್ಮ ದೇಶದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಸಾರಿದ್ದಾರೆ. ಅದರಂತೆ ದೇಶದ ಸಂತರು ಅಕ್ಷರ ದಾಸೋಹ ಮತ್ತು ದಾಸೋಹದ ಮೂಲಕ ದೇಶವನ್ನು ಸನ್ಮಾರ್ಗದತ್ತ ಕೊಂಡೊಯ್ಯವ ಕೆಲಸ ಮಾಡುತ್ತಿದ್ದಾರೆ ಎಂದರು.
ಇಂದಿನ ಯುವ ಜನಾಂಗ ನಮ್ಮ ಧರ್ಮ ಆಚಾರ ವಿಚಾರಳಿಂದ ದೂರವಾಗುತ್ತಿರುವ ಆತಂಕ ಎದುರಾಗುತ್ತಿದೆ. ಇದಕ್ಕಾಗಿ ಮಠ ಮಾನ್ಯಗಳೊಂದಿಗೆ ಪ್ರತಿಯೊಂದು ಮನೆಯಲ್ಲೂ ಯುವ ಪೀಳಿಗೆಯನ್ನು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿ ಗಳು ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಹಾರನಹಳ್ಳಿ ಗ್ರಾಮ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಂತರು ಹಾಗೂ ಮಠಗಳಿಗೆ ಪ್ರೊತ್ಸಾಹ ನೀಡುವ ಜನರು ಇಲ್ಲಿರುವುದರಿಂದ ನಾಡಿನ ಬಹುತೇಕ ಎಲ್ಲಾ ಸಂತರು ಇಲ್ಲಿಗೆ ಬಂದು ಹೋಗಿದ್ದಾರೆ ಎಂದರು.
ಯಡಿಯೂರಪ್ಪನವರ ಕುಟುಂಬ ಮಠ ಮಾನ್ಯಗಳಿಗೆ ನೀಡಿದ ಸಹಕಾರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ವಿಜಯೇಂದ್ರ ಅವರ ನಾಯಕತ್ವವನ್ನು ಯುವ ಪೀಳಿಗೆ ಒಪ್ಪಿಕೊಂಡಿದೆ. ಅವರು ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ದಿಸಿದರೂ ಗೆಲ್ಲತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಮಹಾಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರ ಕುಟುಂಬದವರಲ್ಲಿ ದೈವಿ ಗುಣ ಹಾಗೂ ಸೇವಾ ಮನೋಭಾವ ಇರುವುದರಿಂದಲೇ ರಾಜಕಾರಣದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಇಂದು ಆರಂಭವಾದ ಹರಪುರಾದೀಶನ ದೀಪೋತ್ಸವ ಭಕ್ತರ ಸಹಕಾರದಿಂದ ಪ್ರತಿವರ್ಷ ಯಶಸ್ವಿಯಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪ್ರೆಸ್‌ಟ್ರಸ್ಟ್ ಅಧ್ಯಕ್ಷರು, ಮೊಹರೆ ಹಣುಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್. ಮಂಜುನಾಥ್‌ರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ಗುತ್ತಲ ಶ್ರೀ ಕಲ್ಮಠದ ಶ್ರೀ ಪ್ರಭು ಕುಮಾರ ಮಹಾಸ್ವಾಮಿಗಳು, ತಾಳಗುಪ್ಪ ಕೂಡ್ಲಿಮಠದ ಶ್ರೀ ಸಿದ್ದವೀರ ಮಹಾಸ್ವಾಮಿಗಳು, ಗೊಗ್ಗೆಹಳ್ಳಿ ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮೂಡಿ ವಿರಕ್ತ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಜೆಎ ಹಿರೇಮಠದ ಶ್ರೀ ಡಾ. ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕ್ಯಾಸನೂರು ಶ್ರೀ ವಿಜಯಕುಮಾರ ದೇಶಿಕರು, ಮಾಜಿ ಶಾಸಕ ಅಶೋಕ್‌ನಾಯ್ಕ, ಟಿ.ಬಿ. ಜಗದೀಶ್ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.