
ಶಿವಮೊಗ್ಗ :- ನಗರದ ಪ್ರತಿಷ್ಟಿತ ಪದವೀಧರ ಸಹಕಾರ ಸಂಘದ 2025ರ ಕ್ಯಾಲೆಂಡರ್‌ನ್ನು ಇಂದು ಪತ್ರಿಕಾ ಭವನದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಎಂ.ಶಂಕರ್ ಬಿಡುಗಡೆ ಮಾಡಿದರು. ಟೇಬಲ್ ಹಾಗೂ ವಾಲ್ ಕ್ಯಾಲೆಂಡರ್ ನ್ನು ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಗುರುರಾಜ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ, ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ 2020ರಲ್ಲಿ ಅಧಿಕಾರಕ್ಕೆ ಬಂದಿದ್ದ ನಮ್ಮ ತಂಡವು ಇದೀಗ 5 ವರ್ಷವನ್ನು ಪೂರೈಸುವ ಅಂತದಲ್ಲಿದೆ. ನಮ್ಮ ಅವಧಿಯಲ್ಲಿ ಬ್ಯಾಂಕಿನ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು , ಯೋಜನೆಗಳನ್ನು ರೂಪಿಸಿ ಬ್ಯಾಂಕ್‌ನ್ನು ಮತ್ತಷ್ಟು ಸದೃಢಗೊಳಿಸಿದ್ದೇವೆ ಎಂದರು.
ಈ ವರ್ಷ ದಾಖಲೆ ವಹಿವಾಟು ನಡೆಸಿದ್ದು, ಸುಮಾರು 214.20 ಕೋಟಿ ವಹಿವಾಟು ನಡೆಸಿ 7.41 ಕೋಟಿ ಲಾಭದಲ್ಲಿ 1.29 ಕೋಟಿ ನಿವ್ವಳ್ಳ ಲಾಭವನ್ನು ಬ್ಯಾಂಕ್ ಗಳಿಸಿದೆ. ಇದು ಹೆಮ್ಮೆಯ ವಿಷಯವಾಗಿದೆ. ಬ್ಯಾಂಕಿನ 50ನೇ ವರ್ಷದ ಅಂಗವಾಗಿ ಕೃಷಿ ನಗರದಲ್ಲಿ 4ಅಂತಸ್ತಿನ ಹೊಸ ಶಾಖಾ ಕಛೇರಿಯನ್ನು ತೆರೆಯಲಾಗುವುದು. ಈಗಾಗಲೇ ಕಾಮಗಾರಿ ಕೆಲಸಗಳು ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನು 5 ತಿಂಗಳಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ ಎಂದರು.
4 ಅಂತಸ್ತಿನ ಈ ಕಟ್ಟಡದಲ್ಲಿ ಬಹುಶಃ ರಾಜ್ಯದಲ್ಲಿ ಅದರಲ್ಲೂ ಸಹಕಾರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಲಾಕರ್ ಪ್ಲಾಜವನ್ನು ತೆರೆಯಲಾಗುವುದು. ಇಂದಿನ ಕೌಟಂಬಿಕ ಸನ್ನಿವೇಶಗಳ ಹಿನ್ನಲೆಯಲ್ಲಿ ಹಿರಿಯರು ಒಬ್ಬೊಬ್ಬರೇ ಮನೆಯಲ್ಲಿ ಇರುತ್ತಾರೆ. ಇದರಲ್ಲಿ ನಮ್ಮ ಸದಸ್ಯರು ಹೆಚ್ಚಾಗಿದ್ದಾರೆ. ಇವರ ಅನುಕೂಲಕ್ಕಾಗಿ ಮನೆಯ ದಾಖಲೆ, ಬೆಲೆಬಾಳುವ ವಸ್ತುಗಳನ್ನು ಲಾಕರ್‌ನಲ್ಲಿ ಇಡಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ ಎಂದರು.
ಬ್ಯಾಂಕಿನ ಶಾಖೆಯು 2ನೇ ಅಂತಸ್ತಿನಲ್ಲಿ ಪ್ರಾರಂಭವಾಗಲಿದ್ದು, ಈ ಭಾಗದಲ್ಲಿ ಸುಮಾರು 2 ಸಾವಿರ ಸದಸ್ಯರು ಇರುತ್ತಾರೆ. ಅವರ ಅನುಕೂಲಕ್ಕಾಗಿ ಈ ಶಾಖೆಯನ್ನು ತೆರೆಯಲಾಗುವುದು. ಪದವಿಧರರ ಬ್ಯಾಂಕ್ ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೇ ಸಮಾಜಮುಖಿ ಕಾರ್ಯವನ್ನು ಕೂಡ ಮಾಡುತ್ತ ಬಂದಿದೆ. ಕುವೆಂಪು ವಿವಿಯಲ್ಲಿ ಗಣಿತ, ಎಂ.ಕಾಂ., ಹಾಗೂ ಎಂ.ಬಿ.ಎ., ಹಾಗೂ ಅರ್ಥಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬಹುಮಾನವನ್ನು ಘೋಷಣೆ ಮಾಡಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ಜೋಗದ ವೀರಪ್ಪ, ಯು.ಶಿವಾನಂದ್, ಮಮತ, ಸುರೇಶ್, ಪ್ರಸನ್ನ, ಕೃಷ್ಣಮೂರ್ತಿ, ರುದ್ರೇಶ್, ಚಂದ್ರಶೇಖರ್, ರಮ್ಯಾ, ಜಗದೀಶ್ ಇನ್ನಿತರರಿದ್ದರು.