
ಸಾಗರ :- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಾಜು ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿದ್ಯಾರ್ಥಿಗಳಿಂದ ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಡಿ. 21ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಗೆ ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಅದೇ ಕಾಲೇಜಿನ ವಿದ್ಯಾರ್ಥಿ ನಿಶ್ಚಯ ಕುಮಾರ್ ಎಂಬಾತ ತನ್ನ ತಂದೆಯೊಂದಿಗೆ ಬಂದು ಉಪನ್ಯಾಸಕರ ಎದುರಿನಲ್ಲೇ ತಮ್ಮನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ರಾಜು ಅವರು ತಿಳಿಸಿದ್ದಾರೆ.
ಈ ಕುರಿತು ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಲ್ಲೆ ನಡೆಸಿದವರ ವಿರುದ್ದ ಎಫ್‌ಐಆರ್ ದಾಖಲಾಗಿದ್ದು ಈತನಕ ಆರೋಪಿಗಳ ಬಂಧನವಾಗಿಲ್ಲ. ಒತ್ತಡದ ನಡುವೆ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಹಲ್ಲೆಗಳು ನಡೆಯದಂತೆ ಸೂಕ್ತ ಗಮನ ಹರಿಸಬೇಕು. ರಾಸಜು ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ದೇವೇಂದ್ರಪ್ಪ, ಸಹದೇವ್, ಪ್ರೊ. ಸುರೇಶ್, ಪ್ರೊ. ಚಂದ್ರಶೇಖರ್ ಮಾತನಾಡಿದರು. ವಿದ್ಯಾ, ಶ್ರೀಧರ್, ನಾಗರಾಜ್, ಬಸವರಾಜ್, ಮಂಜುನಾಥ್, ಪ್ರಕಾಶ್, ಮಹಾವೀರ ಜೈನ್, ಚಂದ್ರಶೇಖರ್, ಮಂಜಪ್ಪ, ಮಮತಾ ಹೆಗಡೆ, ಸುಮಾ, ಸುರೇಶ್, ಉಷಾ, ಸೀಮಾ ಕೌಶರ್ ಇನ್ನಿತರರು ಹಾಜರಿದ್ದರು.