
ಶಿವಮೊಗ್ಗ :- ಗಾಜನೂರು ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ೧೪ ನೇ ಬ್ಯಾಚ್ (1999 -2006) ನ ವಿದ್ಯಾರ್ಥಿಗಳ ರಜತ ಮಹೋತ್ಸವದ ಅಂಗವಾಗಿ ಡಿ. 22 ರಂದು ಬೆಳಗ್ಗೆ 10 ಗಂಟೆಗೆ ಗಾಜನೂರು ನವೋದಯ ವಿದ್ಯಾಲಯದಲ್ಲಿ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲಿ ಮಾತನಾಡಿದ ಅವರು, ಡಿ. 22 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ವಿಶೇಷ ಅತಿಥಿಗಳಾಗಿ ಗಾಜನೂರು ನವೋದಯ ವಿದ್ಯಾಲಯದ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ದೆಹಲಿಯ ನವೋದಯ ವಿದ್ಯಾಲಯದ ಸಮಿತಿಯ ನಿವೃತ್ತ ಕಮಿಷನರ್ ಹೆಚ್.ಎನ್.ಎಸ್.ರಾವ್ ಹಾಗೂ ಹಾಲಿ ಕಮಿಷನರ್ ಗಳಾದ ಎ.ಎನ್. ರಾಮಚಂದ್ರ, ಎಸ್.ವಿ.ಶೇಷಾದ್ರಿ, ಸಾಯಿ ರಂಗರಾವ್, ಎ.ವೈ.ರೆಡ್ಡಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೋದಯ ಶಾಲೆಯ ಪ್ರಾಂಶುಪಾಲರಾದ ಜನ್ಸನ್ ಪಿ. ಜೇಮ್ಸ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು, ಪೋಷಕರು, ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ 1000 ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಗಾಜನೂರು ನವೋದಯ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಲಿದ್ದಾರೆ ಎಂದರು.
ಅಂದು ಗಾಜನೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಗುವುದು ಎಂದ ಅವರು, ನವೋದಯ ಶಾಲೆಯ ಹಳೇ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ವಿಜನಿಗಳಾಗಿ, ಸೇನಾಧಿಕಾರಿಗಳಾಗಿ, ಇಂಜಿನಿಯರ್ ಗಳಾಗಿ, ವೈದ್ಯರುಗಳಾಗಿ, ವಾಣಿಜ್ಯೋದ್ಯಮಿಗಳಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಧಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ’ನವೋದಯ ಭೂ?ಣ’ ಹಾಗೂ ’ನವೋದಯ ರತ್ನ’ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನವೋದಯ ಶಾಲೆಯ ಎಲ್ಲ ಹಳೇಯ ವಿದ್ಯಾರ್ಥಿಗಳು ತಮ್ಮ ಸವಿ ನೆನಪುಗಳೊಂದಿಗೆ ಮನದಾಳವನ್ನು ಹಂಚಿಕೊಳ್ಳಲಿದ್ದಾರೆ. 14ನೇ ಬ್ಯಾಚ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಡೊಳ್ಳು ಕುಣಿತ, ಹಾಡುಗಾರಿಕೆ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು.
ಹೆಣ್ಣು ಮಕ್ಕಳಿಗೆ ಕ್ರಿಕೆಟ್ ತರಬೇತಿ ಶುರು ಮಾಡಿದ್ದೇವೆ. 2 ಶೆಟಲ್ ಕೋರ್ಟ್ ನ್ನೂ ಸ್ಥಾಪನೆ ಮಾಡಲು ಮುಂದೆ ಬಂದಿದ್ದಾರೆ. ನವೋದಯ ಪ್ರವೇಶ ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆಯುವುದನ್ನು ಕಡಿಮೆಗೊಳಿಸಬೇಕೆಂದಿದ್ದೇವೆ. ಹುಂಚ, ಕೋಣಂದೂರು, ಶಿಕಾರಿಪುರ, ಶಿರಾಳಕೊಪ್ಪ ಸೇರಿದಂತೆ ಒಟ್ಟು 4 ಸ್ಥಳದಲ್ಲಿ ಉಚಿತವಾಗಿ ಕೋಚಿಂಗ್ ಕೊಡುತ್ತಿದ್ದೇವೆ ಎಂದರು.
14 ನೇ ಬ್ಯಾಚ್ ನ ವಿದ್ಯಾರ್ಥಿಗಳ ರಜತ ಮಹೋತ್ಸವದ ಅಂಗವಾಗಿ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯಲ್ಲಿ ಸಾಗರದ ಕಿನ್ನರ ಮೇಳದ ತಂಡದ ವತಿಯಿಂದ ’ಇರುವೆ ಪುರಾಣ’ ನಾಟಕ ಪ್ರದರ್ಶನ ಮಾಡಲಾಗಿದ್ದು, 14 ನೇ ಬ್ಯಾಚ್ ನ ವಿದ್ಯಾರ್ಥಿಗಳೆಲ್ಲರ ಆರ್ಥಿಕ ಸಹಕಾರದಲ್ಲಿ ಶಾಲೆಗೆ ಕುಡಿಯುವ ನೀರಿನ ಅಗತ್ಯತೆಯನ್ನು ಕಂಡು 1 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿಯ ದುರಸ್ತಿಗೊಳಿಸಿ, ಪೈಪ್ ಲೈನ್ ಅಳವಡಿಸಿ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದರು.
ಡಾ. ವಾದಿರಾಜ್ ಕುಲಕರ್ಣಿ ಮಾತನಾಡಿ, ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆಯನ್ನು ಸರ್ಜಿ ಆಸ್ಪತ್ರೆ ನೇತೃತ್ವದಲ್ಲಿ ಮತ್ತು ಕಣ್ಣು ತಪಾಸಣೆಯನ್ನು ಶಂಕರ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ನಡೆಸಲಾಯಿತು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ವಾದಿರಾಜ್ ಕುಲಕರ್ಣಿ, ೧೪ ನೇ ಬ್ಯಾಚ್ ನ ವಿದ್ಯಾರ್ಥಿಗಳಾದ ಕಾರ್ತೀಕ್, ಪವನ್ ಕುಮಾರ್ ಪಿ.ಟಿ ಹಾಗೂ ಡಾ.ಚೇತನ್ ನವಿಲೇಹಾಳ್, ಯುವರಾಜ್, ಉಮಾಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.