google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಗೆ ಅಹಿಂದ ಚಳವಳಿ ಸಂಘಟನೆ ಮತ್ತು ಅಹಿಂದ ಜನ ಜಗೃತಿ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಪಂಚಮಸಾಲಿ ಸಮಾಜವು ಮಠಾಧೀಶರ ನೇತೃತ್ವದಲ್ಲಿ 2ಎ ಮೀಸಲಾತಿ ಕೇಳುತ್ತಿರುವುದು ಅಸಂವಿಧಾನಿಕವಾದದ್ದು, ಇದನ್ನು ವಿರೋಧಿಸಿ ಡಿ. 18 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಹಿಂದ ಸಂಘಟನೆಯ ಗೌರವಾಧ್ಯಕ್ಷ ಪ್ರೊ. ರಾಚಪ್ಪತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜವು ಸಾಮಾಜಿಕ, ಶೈಕ್ಷಣಿಕ , ರಾಜಕೀಯ ಹಾಗೂ ಆರ್ಥಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಬಲಿಷ್ಟವಾಗಿದೆ. ಅಲ್ಲದೆ ಈಗಾಗಲೇ ಈ ಸಮಾಜಕ್ಕೆ ೩ಬಿನಲ್ಲಿ ಶೇ. 5ರಷ್ಟು ಮೀಸಲಾತಿ ಪಡೆದಿದ್ದು, ಅದರ ಲಾಭ ಪಡೆದು ಸಾಕಷ್ಟು ಮುಂದುವರೆದಿದೆ. ಹೀಗಿದ್ದು ಕೂಡ ಈಗ ಈ ಸಮಾಜವು 2ಎ ನಲ್ಲಿ ಮೀಸಲಾತಿ ಕೇಳುತ್ತಿರುವುದರ ಹಿಂದೆ ದುರ್ಬಲ ಜತಿಗಳ ಸೌಲಭ್ಯ ಕಸಿಯುವ ಹುನ್ನಾರ ಅಡಗಿದೆ ಎಂದು ಅವರು ದೂರಿದರು.

ಈಗಾಗಲೇ 2ಎ ನಲ್ಲಿ ಮೀಸಲಾತಿ ಪಡೆದಿರುವ ಆಗಸರು, ಬೆಸ್ತರು, ಕುಂಬಾರರು ಸೇರಿದಂತೆ 102 ಜಾತಿಯ ಜನರು ಈಗಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸೌಲಭ್ಯ ಪಡೆಯಲು ಆಗಿಲ್ಲ. ಪಂಚಮಸಾಲಿಗಳಿಗೆ ಹೋಲಿಸಿದರೆ ಈ ಸಮಾಜದ ಜನರು ಈಗಲೂ ತೀರಾ ಕೆಳ ಹಂತದಲ್ಲಿದ್ದಾರೆ. ಇಂತಹ ಸಂದರ್ಭದಲ್ಲೂ 2ಎ ನಲ್ಲಿಯೇ ಮೀಸಲಾತಿ ಕೊಡಿ ಎಂದು ಪಂಚಮಸಾಲಿ ಸಮಾಜವು ಹೋರಾಟಕ್ಕಿಳಿದು, ಬೆಳಗಾವಿ ವಿಧಾನ ಸೌಧದ ಮುಂದೆ ಧರಣಿ ನಡೆಸಿ ರಾದ್ದಾಂತ ಮಾಡಿರುವುದು ಅತ್ಯಂತ ಖಂಡನೀಯವಾದದ್ದು ಎಂದರು.

ಶತಶತಮಾನಗಳಿಂದ ಶೋಷಣೆಗೊಳಗಾಗಿ ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದಿರುವ ಜತಿಗಳಿಗೆ ಸಂವಿಧಾನದಲ್ಲಿ ಉಲ್ಲೇಖಿಸಲಾದ ಮಾನದಂಡಗಳಡಿ ನಿಗಧಿ ಪಡಿಸುವ ಮೀಸಲಾತಿಯನ್ನು ದಕ್ಕಿಸಿಕೊಳ್ಳಲು ಮೇಲ್ವರ್ಗಗಳು ದಬ್ಬಾಳಿಕೆ ನಡೆಸುವ ರೀತಿ ಸರಿಯಾದುದ್ದಲ್ಲ. ಹಾಗೆಯೇ ಇವರಿಗೆ ಮೀಸಲಾತಿ ಕೊಡಿ ಎಂದು ಯಾವ ಆಯೋಗವು ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ವರದಿ ಕೊಟ್ಟಿಲ್ಲ. ಹಾಗಾಗಿ ಇದು ಅಸಂವಿಧಾನಿಕವು ಹಾಗೂ ಅಪ್ರಸ್ತುತವೂ ಆದ ಮೀಸಲಾತಿ ಹೋರಾಟ. ಇದನ್ನು ವಿರೋಧಿಸಿಯೇ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಡಿ. 18 ರಂದು ಬೆಳಗ್ಗೆ ಶಿವಮೊಗ್ಗ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಮುಖಂಡರಾದ ಸೈಯದ್ ಸನಾವುಲ್ಲಾ, ಕಲ್ಲೂರು ಮೇಘರಾಜ್, ಚನ್ನವೀರಪ್ಪ ಗಾಮನಗಟ್ಟಿ, ಆರ್.ಟಿ. ನಟರಾಜ್, ಅತ್ತಿಗುಂದ ಚಂದ್ರಶೇಖರ್, ರಾಜಮ್ಮ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *