
ಶಿವಮೊಗ್ಗ :- ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಶಿವಮೊಗ್ಗ ಜಿಲ್ಲೆಯ ಏಕೈಕ ಕ್ರೀಡಾಪಟು ಮೊಹಮದ್ ಬಿಲಾಲ್ ಆಯ್ಕೆಯಾಗಿ ಡಿ. 19 ರಿಂದ 24 ರವರೆಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಶನ್‌ನ ಅಬ್ದುಲ್ ಗನಿ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನ. 13 ರಂದು ದಾವಣಗೆರೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ 19 ವರ್ಷ ವಯೋಮಿತಿಯೊಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಖೀಬ್ ಅಹಮ್ಮದ್ ದರ್ವೆಶ್ ಮತ್ತು ಜುಗುನು ದಂಪತಿಗಳ ಪುತ್ರ ಹಾಗೂ ಇಂಪೀರಿಯಲ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವರ್ಷದ ವಿದ್ಯಾರ್ಥಿ ಮೊಹಮ್ಮದ್ ಬಿಲಾಲ್ ದರ್ವೆಶ್-62 ಕೆಜಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆಯುವ ಮುಖಾಂತರ ಡಿ. 19 ರಿಂದ 24 ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ಎಸ್ ಜಿ ಎಫ್ ಐ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಶನ್ ನ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಿಂದ ದಾವಣಗೆರೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಪೈಕಿ ಮಹಮದ್ ಬಿಲಾಲ್ ಪದಕ ಪಡೆದಿರುವ ಏಕೈಕ ಕ್ರೀಡಾಪಟುವಾಗಿದ್ದು, ಇದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ವರ್ಷ ಸಹ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಹ ಇವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಇದೀಗ ಎರಡನೇ ಬಾರಿ ಬಿಲಾಲ್ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆಯುವ ಮುಖಾಂತರ ಶಿವಮೊಗ್ಗ ಜಿಲ್ಲೆಗೆ ಖ್ಯಾತಿ ತಂದಿದ್ದಾರೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಬಿಲಾಲ್ ಉತ್ತಮ ಪ್ರದರ್ಶನ ತೋರಿ ರಾಷ್ಟ್ರಮಟ್ಟದಲ್ಲಿ ಪದಕ ಪಡೆದು ಜಿಲ್ಲೆಗೆ ಖ್ಯಾತಿ ತರಲಿ ಎಂದು ಆಶಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಇಂಪಿರಿಯಲ್ ಪಿಯು ಕಾಲೇಜ್ ನ ಪ್ರಾಂಶುಪಾಲರಾದ ಖಲೀಂ ಉಲ್ಲಾ ಖಾನ್, ಅಧ್ಯಕ್ಷ ಮುಖೀಬ್ ಅಹ್ಮದ್, ಉಪಾಧ್ಯಕ್ಷ ಮಂಜಪ್ಪ, ಖಜಂಚಿ ಮೀನಾಕ್ಷಿ, ಮೊಹಮ್ಮದ್ ಮುಜಹೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.