google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡದ ರೊಬೊಗಳು ನಾ ಮುಂದು, ತಾ ಮುಂದು ಎಂಬ ಅಲ್ಲಿ ರೋಬೊಗಳ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟಿತ್ತು. ನೆರೆದಿದ್ದ ವಿದ್ಯಾರ್ಥಿಗಳ ಚಿತ್ತ ಕದಲದೆ ತನ್ನೆಡೆಗೆ ಹಿಡಿದಿಟ್ಟುಕೊಳ್ಳುವಲ್ಲಿ ವಿವಿಧ ವಿನ್ಯಾಸದ ರೋಬೊಗಳು ಸಫಲವಾಗಿದ್ದವು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಷನ್ ಎಂಜಿನಿಯರಿಂಗ್ ವಿಭಾಗ, ಐಇಇಇ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆ ಪ್ಲಾಸ್ಮಾ-2024 ಕಾರ್ಯಕ್ರಮ ರೊಬೊಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು.

ಕರ್ನಾಟಕದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 205 ಕ್ಕು ಹೆಚ್ಚು ತಂಡಗಳು ರೋಬೊಟಿಕ್ಸ್ ಸ್ಪರ್ಧೆಗಳಾದ ಡೆಡ್ ರೊಬೊ ರೇಸ್, ರೊಬೊ ಸಾಸರ್, ಸುಮೊ ವಾರ್, ಲೈನ್ ಫಾಲೊವರ್, ಹ್ಯಾಕಥಾನ್ನಲ್ಲಿ ಉತ್ಸುಕರಾಗಿ ಪಾಲ್ಗೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಕ್ಯಾಡೆನ್ಸ್ ಸಿಸ್ಟಂ ಕಂಪನಿ ಡಿಸೈನ್ ಇಂಜಿನಿಯರ್ ಸಂಜಯ್.ಎ.ಸಿ ಮಾತನಾಡಿ, ಸವಾಲುಗಳನ್ನು ಎದುರಿಸಲು ಹೆಚ್ಚು ಆಸಕ್ತಿ ತೋರಿಸಿ. ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಅದೆಷ್ಟೊ ಕೌಶಲ್ಯತೆಗಳು ನಮ್ಮ ಉದ್ಯೋಗ ಬದುಕಿನಲ್ಲಿ ಕೈ ಹಿಡಿದಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ತೊಡಗಿಸಿಕೊಳ್ಳುವ ಮೂಲಕ ಹೊಸತನಕ್ಕೆ, ತಾಂತ್ರಿಕತೆಯ ವಿಕಸನದತ್ತ ಹೆಜ್ಜೆ ಹಾಕಲು ಸಹಕಾರಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಇಂದಿನ ಯುವ ಸಮೂಹ ಕೈಗಾರಿಕರಣದ ನಾಲ್ಕನೇ ತಲೆಮಾರಿನಲ್ಲಿದೆ. ಅಂತಹ ಆಧುನಿಕ ತಲೆಮಾರಿಗೆ ಪ್ಲಾಸ್ಮಾದ ಸಿದ್ದಾಂತಗಳು ಹೆಚ್ಚು ಹತ್ತಿರವಾಗಿದೆ. ತಾಂತ್ರಿಕತೆಯ ಅಗ್ರಗಣ್ಯ ಸ್ಥಾನ ಪಡೆಯುತ್ತಿರುವ ರೊಬೊಗಳು, ಮನುಷ್ಯನ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಯಲ್ಲಿ ಶೀಘ್ರ ಗುಣಮುಖ ಹೊಂದುವ ಅವಕಾಶಗಳ ಮೂಲಕ, ರೊಬೊಗಳು ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಚಾಪನ್ನು ಮೂಡಿಸಿದೆ ಎಂದು ಹೇಳಿದರು.

ಇಂದಿನ ಯುವ ಸಮೂಹದ ಅತಿ ದೊಡ್ಡ ಸವಾಲು ಎಂದರೆ, ಅದು ನಿರಂತರ ಕಲಿಕೆ. ಹೊಸ ತಂತ್ರಜನಕ್ಕೆ ಕೌಶಲ್ಯತೆಗೆ ಉನ್ನತಿಕರಣ ಆಗಲೆಬೇಕಾದ ಅನಿವಾರ್ಯತೆ ನಿಮ್ಮ ಮೇಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಾವು ಕಲಿಕೆಯಲ್ಲಿ ಎಲ್ಲಿದ್ದೆವೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಎನ್‌ಇಎಸ್ ಸಂಸ್ಥೆಯ ಖಜಂಚಿಗಳಾದ ಡಿ.ಜಿ.ರಮೇಶ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಂಯೋಜಕರಾದ ಅನಿಲ್ ಕುಮಾರ್.ಜೆ, ಪ್ರದೀಪ್.ಎಸ್.ಸಿ, ಪ್ರಶಾಂತ್.ಜಿ.ಎಸ್, ವಿದ್ಯಾರ್ಥಿ ಸಂಯೋಜಕರಾದ ರಾಹುಲ್, ರೋಹಿತ್, ಚಿರಾಗ್, ಸುಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *