
ಶಿವಮೊಗ್ಗ :- ಬೆಂಗಳೂರಿನ ಸ್ಪೂರ್ತಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜನಪದ ಗಾಯಕ ಜೋಗಿಲ ಸಿದ್ದರಾಜು, ಅವಿರತ ಹರೀಶ್, ದರ್ಶನ್ ಬಳ್ಳೇಶ್ವರ, ಬಿ.ಟಿ.ಮಾನವ ಹಾಗೂ ಪಿ. ನಾಗೇಂದ್ರ ಇಗ್ಗಲೂರು ಅವರು ನಿರ್ಮಾಣ ಮಾಡುತ್ತಿರುವ ‘ಅವಧೂತ ’ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡವು ನಗರದಲ್ಲಿ ಇಂದು ಅನಾವರಣ ಮಾಡಿತು.
ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲೆಯ ಹೆಸರಾಂತ ಜನಪದ ಕಲಾವಿದ ಸಾಗರದ ಟಾಕಪ್ಪ ಕಣ್ಣೂರು ಅವರು ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಚಿತ್ರ ತಂಡಕ್ಕೆ ಶುಭ ಕೋರಿದರು.ಆ ಬಳಿಕ ಚಿತ್ರದ ವಿಶೇಷತೆ ಕುರಿತು ನಿರ್ದೇಶಕ ಗಂಧರ್ವ ರಾಯರಾವುತ ಅವರು ಮಾಹಿತಿ ನೀಡಿದರು.
ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಧಬಿರುಚಿಯ ಚಿತ್ರವೊಂದನ್ನು ನೀಡಬೇಕೆನ್ನುವ ಉದ್ದೇಶದೊಂದಿಗೆ ನಾವು ಈ ಚಿತ್ರ ನಿರ್ಮಾಣಕ್ಕೆ ಹೊರಟಿದ್ದೇವೆ. ಅದೇ ಕಾರಣಕ್ಕೆ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆ ಕಥೆಯ ಬೇಡಿಕೆಯ ಅನುಸಾರ ಶಿವಮೊಗ್ಗ ಹಾಗೂ ಹೊನ್ನಾಳಿ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ಬಯಸಿದ್ದೇವೆ. 2025 ರ ಜನವರಿ ೨೫ ರ ನಂತರ ಚಿತ್ರೀಕರಣ ಆರಂಭವಾಗಲಿದೆ’ಎಂದು ತಿಳಿಸಿದರು.
ಈ ಚಿತ್ರಕ್ಕೆ ಸುಮಾರು 45ಕ್ಕೂ ಹೆಚ್ಚು ಕಲಾವಿದರು ಬೇಕಾಗಿದ್ದಾರೆಂದು ಹೇಳುವ ಚಿತ್ರ ತಂಡವು, ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಲು ಬಯಸಿದೆ. ಅದೇ ಉದ್ದೇಶದೊಂದಿಗೆ ನಾಳೆ ( ಡಿ. 7) ನಗರದ ಕುವೆಂಪು ರಂಗಮಂದಿರದಲ್ಲಿ ಆಡಿಷನ್ ನಡೆಸುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಶುರುವಾಗಿ ಸಂಜೆ ತನಕ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಗರದ ರಂಗ ಕಲಾವಿದರು, ಆಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಭಾಗವಹಿಸುವವರು ಮಕ್ಕಳ ವಿಭಾಗಕ್ಕೆ 10 ರಿಂದ 12 ವರ್ಷ ಇರಬೇಕು. ಪುರುಷರು 30ರಿಂದ 70 ವರ್ಷದೊಳಗಿರಬೇಕು. ಯುವತಿಯರು ಅಥವಾ ಮಹಿಳೆಯರು 28 ವರ್ಷದ ಮೇಲಿರಬೇಕು ಎಂದು ಮಾಹಿತಿ ನೀಡಿದರು.
ಆಧುನಿಕ ಕಾಲದಲ್ಲೂ ಮನುಷ್ಯ ಮನುಷ್ಯನನ್ನೇ ಶೋಷಣೆಗೆ ಗುರಿಪಡಿಸುವ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಯರಾವುತ ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.ಪ್ರವೀಣ್ ಜೀವಾ ಛಾಯಾಗ್ರಹಣ, ಸೆಂದಿಲ್ ಕುಮಾರ್ ಹಾಗೂ ಬಿನ್ನಿ ಅವರ ಸಹ ನಿರ್ದೇಶನದ ಜತೆಗೆ ನಿರ್ಮಾಪಕರದಲ್ಲಿ ಒಬ್ಬರಾದ ಜೋಗಿಲ ಸಿದ್ದರಾಜು ಅವರೇ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದರು.
ಅವಿರತ ಹರೀಶ್ ಅವರ ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ರಾಷ್ಟ್ರ ಕವಿ ಕುವೆಂಪು ಅವರ ಆಶಯದ ಒಂದೊಳ್ಳೆಯ ಕಥೆಯ ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾದ ಹಿನ್ನೆಲೆಯಲ್ಲಿ ಚಿತ್ರ ಶೀರ್ಷಿಕೆಯನ್ನು ಮೊದಲ ಬಾರಿಗೆ ಶಿವಮೊಗ್ಗದಲ್ಲಿಯೇ ಅನಾವರಣ ಮಾಡಲಾಗಿದೆ ಎಂದು ಚಿತ್ರ ತಂಡ ಹೇಳಿದೆ.