
ಶಿವಮೊಗ್ಗ :- ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಕಾರಿ ಸಂಘಗಳು ವರದಾನವಾಗಿವೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ರೀನಿವಾಸ್ ಟಿ.ವಿ. ಹೇಳಿದರು.
ಅವರು ಕುವೆಂಪು ರಂಗಮಂದಿರದಲ್ಲಿ ನಡೆದ ಗೆಳೆಯರ ಬಳಗ ಸೌಹಾರ್ಧ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.
ಬಡ ಮತ್ತು ಮಧ್ಯಮ ವರ್ಗದವರು ಸಾಲಕ್ಕಾಗಿ ಖಾಸಗಿ ಸಂಸ್ಥೆ ಬಳಿ ಹೋಗುತ್ತಾರೆ. ಆ ಸಂಸ್ಥೆಯವರು ಬಡ್ಡಿ ಮೀಟರ್ ಬಡ್ಡಿ ಎಂದು ಹೊರೆ ಮಾಡುತ್ತಾರೆ ಮತ್ತು ಸುಲಭವಾಗಿ ಸಿಗುವುದಿಲ್ಲ. ಆರ್ಥಿಕವಾಗಿ ಅಭಿವೃದ್ಧಿಯಾಗುವುದರ ಬದಲು ಮತ್ತಷ್ಟು ನಷ್ಟ ಹೊಂದುತ್ತಾರೆ. ಇದನ್ನು ತಪ್ಪಿಸುವ ದೃಷ್ಠಿಯಿಂದ ಸಹಕಾರಿ ಸಂಘಗಳು ಹುಟ್ಟಿಕೊಂಡಿವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಅದರಲ್ಲೂ ಸಣ್ಣ ಸಣ್ಣ ವ್ಯಾಪಾರಸ್ಥರು ಕೈಗಾರಿಗಳನ್ನು ಸ್ಥಾಪಿಸುವವರು ಸಹಕಾರಿಗಳ ಸಂಘಗಳ ಮೊರೆಹೋದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಆದರೆ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರ ಸಹಕಾರ ಅಗತ್ಯ. ಗೆಳೆಯರ ಬಳಗ ಈ ನಿಟ್ಟಿನಲ್ಲಿ ಸಂಘ ಸ್ಥಾಪಿಸಿರುವುದು ಅತ್ಯುತ್ತಮ ಕೆಲಸವಾಗಿದೆ ಎಂದರು.
ಗೆಳೆಯರ ಬಳಗದ ರಾಜಧ್ಯಕ್ಷ ಎಂ.ಆರ್.ಅನಿಲ್‌ಕುಂಚಿ ಮಾತನಾಡಿ, ಪ್ರತಿಯೊಬ್ಬರು ಆರ್ಥಿಕವಾಗಿ ಸ್ವಾವಲಂಬನೆ ಪಡೆಯುವ ಈ ಹಿನ್ನಲೆಯಲ್ಲಿ ಈ ಸಹಕಾರ ಸಂಘ ಸ್ಥಾಪಿಸಲಾಗಿದೆ. ಸಾಲ ಕೊಡುವುದಷ್ಟೇ ಅಲ್ಲ. ಸಾಲ ಪಾವತಿಸುವುದು ಕೂಡ ಮುಖ್ಯವಾಗಿರುತ್ತದೆ. ಬಂಡವಾಳವನ್ನು ಕ್ರೂಡಿಕರಿಸಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ವಿಶೇಷವಾಗಿ ಮಹಿಳೆಯರು ಸಹಕಾರ ಸಂಘಗಳ ಮೂಲಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಗೆ ಹನಿಯ ಜನಪ್ರಿಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಬಸವರಾಜ್ ಮಹಾಮನಿ, ನರಸಿಂಹ ಜ್ಯೋಶಿ ಹಾಗೂ ಸಂಘದ ನೂತನ ನಿರ್ದೇಶಕರುಗಳು ಹಾಜರಿದ್ದರು.