
ಶಿವಮೊಗ್ಗ :- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ವರ್ಷ ಪೂರ್ತಿ ಒತ್ತಡದಲ್ಲಿ ಕೆಲಸ ನಿರ್ವಹಿಸುವುದರಿಂದ ಒತ್ತಡ ನಿರ್ವಹಣೆಯು ಅವಶ್ಯಕವಾಗಿರುತ್ತದೆ ಇದಕ್ಕೆ ಕ್ರೀಡೆ ಉತ್ತಮ ಸಹಕಾರಿಯಾಗಿದೆ ಎಂದು ಜಿ.ಪಂ. ಸಿಇಓ ಹೇಮಂತ್ ಎನ್. ತಿಳಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಗೌರವ ರಕ್ಷೆಯನ್ನು ಸ್ವೀಕರಿಸಿ, ಪಥ ಸಂಚಲನವನ್ನು ವೀಕ್ಷಿಸಿ ಕ್ರೀಡಾಕೂಡಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತಮ ಹವ್ಯಾಸಗಳಲ್ಲಿ, ಕ್ರೀಡೆಯಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವ ಮೂಲಕ ಒತ್ತಡ ನಿರ್ವಹಣೆ ಮಾಡಲು ಸಾಧ್ಯವಿರುತ್ತದೆ ಎಂದರು.

ಪೊಲೀಸ್ ಇಲಾಖೆಯು ಶಿಸ್ತುಭದ್ಧ ಇಲಾಖೆಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂಧಿಗಳು ಒಟ್ಟಿಗೆ ಒಂದು ತಂಡವಾಗಿ ಆಡುವ ಮೂಲಕ ಎಲ್ಲರೂ ಬೆರೆಯಲು, ಮುಕ್ತ ಸಂವಹನ ನಡೆಸಲು ಹಾಗೂ ಉತ್ತಮ ಭಾಂದವ್ಯ ಬೆಸೆಯಲು ಸಾಧ್ಯವಿದ್ದು, ಇದರಿಂದ ಅಧಿಕಾರಿ ಸಿಬ್ಬಂಧಿಗಳ ದೈನಂದಿನ ಕೆಲಸ ಕಾರ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಕ್ರೀಡೆಯಲ್ಲಿ ಕೇವಲ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ಸಹಾ ತೊಡಗಿ ಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗೂ ಕ್ರೀಡೆ ಎಂದ ಮೇಲೆ ಸೋಲು ಮತ್ತು ಗೆಲವು ಸಾಮಾನ್ಯವಾಗಿದ್ದು, ಎಲ್ಲರೂ ಕ್ರೀ ಡಾ ಮನೋಭಾವದಿಂದ ಭಾಗವಹಿಸಿ ಎಂದ ಅವರು, ಕ್ರೀಡಾ ಕೂಟಗಳು ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇರುವ ಉತ್ತಮ ವೇಧಿಕೆಯೂ ಸಹಾ ಆಗಿರುತ್ತದೆ. ಆದ್ದರಿಂದ ಎಲ್ಲರೂ ಕ್ರೀಡಾ ಸ್ಪೂರ್ತಿ ಮತ್ತು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರ್ಯಾಪ್ಪ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಪೋಲಿಸರು ಉಪಸ್ಥಿತರಿದ್ದರು.