
ಶಿವಮೊಗ್ಗ :- ಶತಮಾನ ಪೂರೈಸಿದ ಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಆಧುನಿಕತೆಯ ಟಚ್ ಸಿಕ್ಕಿದ್ದು, ಇಡೀ ಶಾಲೆ ಸುಣ್ಣಬಣ್ಣಗಳಲ್ಲದೆ ಶಾಲೆಯ ಪ್ರತಿಗೋಡೆಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಪ್ರವಾಸಿತಾಣಗಳ ಬಗ್ಗೆ ಚಿತ್ರಗಳನ್ನು ಬಿಡಿಸಲಾಗಿದೆ.

ಈ ಎಲ್ಲಾ ಕೆಲಸಗಳನ್ನು ಮೀನಾಕ್ಷಿ ಚಾರಿಟಬಲ್ ಟ್ರಸ್ಟ್ ಕಣ್ವ ಆಸ್ಪತ್ರೆ, ಕನ್ನಡ ಮನಸ್ಸುಗಳ ಕರ್ನಾಟಕ ತಂಡದ ಕೊಡುಗೆಯಾಗಿದೆ. ಟ್ರಸ್ಟಿನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ಅವರು ಇದಕ್ಕಾಗಿ ಸುಮಾರು 1.5 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ. ಇವರು ಸ್ವತಃ ಕುಂಸಿ ಗ್ರಾಮದವರಾಗಿದ್ದು, ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಅಡಿಯಲ್ಲಿ ಶಾಲೆಯನ್ನು ಸಿಂಗಾರಗೊಳಿಸಿದ್ದು, ಇವರ ಜೊತೆಗೆ ಸುಮಾರು ೬೦ಕ್ಕೂ ಹೆಚ್ಚು ದಾನಿ ಮನಸ್ಸಿನ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಪ್ರಯತ್ನಿಸುವವರ ಶ್ರಮವು ಇದೆ.
ಇದೀಗ ಈ ಶಾಲೆಯ ಗೋಡೆಗಳಲ್ಲಿ ಕನ್ನಡಾಂಭೆ, ಸರಸ್ವತಿ, ಸುಭಾಸಶ್ಚಂದ್ರಬೋಸ್, ಅಕ್ಕಮಹಾದೇವಿ, ಕೆಳದಿ ಶಿವಪ್ಪನಾಯಕ, ಭಗತ್‌ಸಿಂಗ್, ಕಲ್ಲಿನ ರಥಗಳು, ಶಿವಮೊಗ್ಗ ಜಿಲ್ಲೆಯ ಹೆಸರಾಂತ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಾದ ಜೋಗ, ಉಡುತಡಿ ಮತ್ತು ಕವಿಗಳಾದ ಕುವೆಂಪು, ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬೇಂದ್ರೆ ಮತ್ತು ಭೂಪಟಗಳು ಹೀಗೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಸಲಾಗಿದೆ.
ಕುಂಸಿಯ ಈ ಶಾಲೆ ಶತಮಾನದ ಸಂಭ್ರಮವನ್ನು ಆಚರಿಸುವ ಈ ಹೊತ್ತಿನಲ್ಲಿ ಕನ್ನಡ ಶಾಲೆಗಾಗಿ ಶ್ರಮಿಸುತ್ತಿರುವ ಮತ್ತು ಈ ರೀತಿಯ ಸುಣ್ಣಬಣ್ಣ ಮಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಆಸಕ್ತಿಯನ್ನು ಬೆಳೆಸುತ್ತಿರುವ ದಾನಿಗಳಿಗೆ ಶಾಲೆಯ ಉಪಧ್ಯಾಯ ವರ್ಗ ಹಾಗೂ ಎಸ್‌ಡಿಎಂಸಿ ತನ್ನ ಕೃತಜ್ಞತೆಯನ್ನು ಅರ್ಪಿಸಿದೆ.