google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲೆಯ ಅಭಿವೃದ್ಧಿಗೆ 2ಸಾವಿರ ಕೋಟಿ ರೂ. ಗಳ ವಿಶೇಷ ಅನುದಾನವನ್ನು ಸರ್ಕಾರದಿಂದ ಪಡೆಯಲಾಗುವುದು ಎಂದು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಇಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಗಳನ್ನು ಹೊರತುಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಸುಮಾರು ೨ಸಾವಿರ ಕೋಟಿ ರೂ,.ಗಳು ಬೇಕಾಗಬಹುದು ಮುಖ್ಯಮಂತ್ರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಮೆಗ್ಗಾನ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಸುಮಾರು ೭೦ಕೋಟಿ ರೂ.ಗಳು ಬೇಕಾಗಬಹುದು. ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು ಅಲ್ಲದೆ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕೂಡ ಈಗಾಗಲೇ ಪ್ರಗತಿಯಲ್ಲಿದೆ. ಮಹಾತ್ಮಗಾಂಧಿ ನಗರವಿಕಾಸ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 162 ಕಿ.ಮೀ. ರಸ್ತೆಯನ್ನು ೧೧೮ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

ಜಿಲ್ಲೆಗೆ ಒಂದು ಜಿಲ್ಲಾಡಳಿತ ಭವನದ ಅವಶ್ಯಕತೆಯಿದ್ದು, ಅದನ್ನು ಕೂಡ ನಿರ್ಮಾಣ ಮಾಡಲು ಈಗಾಗಲೇ ಪ್ರಯತ್ನಿಸಲಾಗಿದೆ. ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೇವೆಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲಾಗುವುದು ಮತ್ತು ಈಗಾಗಲೇ ಜೆಇಇ ಉಚಿತ ತರಬೇತಿ ತರಗತಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಬಳಸಿದ ಹಣದಲ್ಲಿ ಇನ್ನೂ ೬ ಕೋಟಿ ರೂ. ಇದೆ. ಉಳಿದ ೬೦ ಸಾವಿರ ಮಕ್ಕಳಿಗೂ ಕೂಡ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಆದರೆ ಕಾನೂನಿನ ತೊಡಕು ಇರುವ ಕಡೆ ಸ್ವಲ್ಪ ಕಷ್ಟವಾಗುತ್ತದೆ. ಈಗಾಲೇ ಜಿಲ್ಲಾಡಳಿತ ಸಮೀಕ್ಷೆ ಕಾರ್ಯ ನಡೆಸುತ್ತಿದೆ ಎಂದರು.

ಈಗಾಗಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಮೀಕ್ಷೆಯಿಂದ ಸಮಾನತೆ ಸಾಧಿಸಲು ಸಾಧ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಂಕಿಅಂಶಗಳು ಮುಖ್ಯವಾಗುತ್ತವೆ. ಈ ಬಗ್ಗೆ ಹಲವು ದೂರುಗಳು ಕೂಡ ಇವೆ. ಇವೆಲ್ಲವನ್ನು ಇಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂದಿಸಿದಂತೆ ಉತ್ತರ ನೀಡಿದ ಅವರು, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಯೋಜನೆಯನ್ನು ಮುಂದುವರೆಸಲಾಗುವುದು. ಈ ಬಗ್ಗೆ ಅನೇಕ ವಿರೋಧಗಳು ಕೂಡ ಇವೆ. ಇವುಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಮುಂದುವರಿಯಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಜಿ.ಪಂ. ಸಿಇಓ ಹೇಮಂತ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *