
ಶಿವಮೊಗ್ಗ :- ಸಮಾಜಮುಖಿ ಕಾರ್ಯಕ್ಕೆ ಸುಶಿಕ್ಷಿತ ಯುವ ಸಮೂಹ ತೆರೆದುಕೊಳ್ಳುವ ಮೂಲಕ ದೇಶದ ಆಶಾಕಿರಣವಾಗಿ ಪ್ರಜ್ಚಲಿಸಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಕರೆ ನೀಡಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜರೋಹಣ ಗೊಳಿಸಿ ಮಾತನಾಡಿ, ಮನೆಗಳಲ್ಲಿ ಹಬ್ಬಗಳನ್ನು ಕುಟುಂಬದ ಸಂಪ್ರದಾಯದಂತೆ ಆಚರಿಸುತ್ತೇವೆ. ಅದರೆ ದೇಶದ ಹಬ್ಬವನ್ನು ಏಕತೆಯ ಸಾರವಾಗಿ, ಒಟ್ಟಾಗಿ ಕೂಡಿ ಆಚರಿಸುತ್ತೇವೆ. ಅದುವೆ ಭಾರತೀಯರ ವಿಶೇಷತೆ. ಭಾರತ ಸ್ವಾತಂತ್ರಗೊಂಡ ಸಂದರ್ಭದಿಂದ ಇಲ್ಲಿಯವರೆಗೆ ಜನಸಂಖ್ಯೆ ಎಂಬುದು ಮೂರು ಪಟ್ಟು ಹೆಚ್ಚಾಗಿದೆ. ಸಮಾಜದ ಸುಸ್ಥಿರ ಬೆಳವಣಿಗೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಪಾತ್ರ ವಹಿಸಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸಮಾಜಮುಖಿ ನಿರ್ವಹಣೆಗಿಂತ, ವಾಣಿಜ್ಯೀಕರಣಕ್ಕೆ ಹೆಚ್ಚು ಆಸ್ಪದ ನೀಡುತ್ತಿರುವುದು ವಿಷಾದನೀಯ. ನಮ್ಮ ಯುವ ಸಮೂಹಕ್ಕೆ ಸಂಸ್ಕಾರಯುತ ಶಿಕ್ಷಣ ಬೇಕಿದೆ. ಅಕ್ಷರ ಕಲಿತವನು ಭ್ರಷ್ಟನಾಗಬಹುದು, ಅದರೆ ಸಂಸ್ಕಾರ ಕಲಿತವನು ಎಂದಿಗೂ ಭ್ರಷ್ಟನಾಗುವುದಿಲ್ಲ. ಇಂದು ಶಿಕ್ಷಣ ಕ್ಷೇತ್ರ ದ್ವಂದ್ವದ ನಿಲುವಿನಲ್ಲಿದೆ. ವಿಭಿನ್ನ ಕಾಯ್ದೆಗಳ ಮೂಲಕ ಕಲಿಯುವ ಮಕ್ಕಳ ಮೇಲೆ ಪ್ರಯೋಗ ಸಲ್ಲದು ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಖಜಾಂಚಿ ಡಿ.ಜಿ. ರಮೇಶ್, ನಿರ್ದೇಶಕರಾದ ಹೆಚ್.ಸಿ. ಶಿವಕುಮಾರ್, ಮಧುರಾವ್, ಆಜೀವ ಸದಸ್ಯರಾದ ಗೋವಿಂದರಾಜ್, ಜಗದೀಶ್, ಆನಂದ, ಗುರುಪ್ರಸಾದ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ನಿರೂಪಿಸಿದರು.