ಶಿವಮೊಗ್ಗ :- ಬಿಲ್ ಪಾವತಿ ಮಾಡುವವರೆಗೂ ಪಡಿತರ ಸಾಗಾಣಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪಡಿತರ ಸಾಗಾಣಿಕೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ್ ಎಂ. ಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 2025ರಿಂದ ಜೂನ್ 2025ರವರೆಗೆ ಎನ್.ಎಫ್.ಎಸ್.ಎ. ಹಾಗೂ ಫೆಬ್ರವರಿ 2025ರಿಂದ ಜೂನ್ 2025ರವರೆಗೆ ಅನ್ನಭಾಗ್ಯ ಪಡಿತರ ಸಾಗಾಣಿಕೆ ಕಾರ್ಯವನ್ನು ನಾವು ಪೂರ್ಣ ಮಾಡಿದ್ದೇವೆ. ಈ ಬಗ್ಗೆ ಸಾಗಾಣಿಕೆ ವೆಚ್ಚದ ಬಿಲ್ ಅನ್ನು ಕೂಡ ತಲುಪಿಸಿದ್ದೇವೆ. ಆದರೂ ಇದುವರೆಗೂ ಸಾಗಾಣೆಯ ಬಿಲ್ ಪಡಿತರ ಸಾಗಾಣೆ ಗುತ್ತಿಗೆದಾರರಿಗೆ ತಲುಪಿಲ್ಲ. ಇದರಿಂದ ನಮಗೆ ಸಾಗಾಣೆ ಮಾಡುವುದು ಕಷ್ಟವಾಗುತ್ತದೆ ಎಂದರು.
ಸುಮಾರು 5 ತಿಂಗಳಿಂದ ನಮಗೆ ಬಿಲ್ ಬಂದಿಲ್ಲ. ಶಿವಮೊಗ್ಗ ಜಿಲ್ಲೆ ಒಂದರಲ್ಲಿಯೇ 10 ಕೋಟಿ ರೂ. ಬಾಕಿ ಇದೆ. ರಾಜ್ಯದಲ್ಲಿ 250 ಕೋಟಿ ರೂ. ಬಾಕಿ ಇದೆ. ಹಲವು ಬಾರಿ ನಾವು ಈ ಬಗ್ಗೆ ಮನವಿ ಕೂಡ ಮಾಡಿದ್ದೇವೆ. ಆದರೂ. ಗುತ್ತಿಗೆದಾರರಿಗೆ ಹಣ ಪಾವತಿಯಾಗಿಲ್ಲ ಎಂದರು.
ಇದರಿಂದ ಅನ್ನಭಾಗ್ಯ ಮತ್ತು ಇತರೆ ಯೋಜನೆ ಫಲಾನುಭವಿಗಳಿಗೆ ತೊಂದರೆ ಆಗಬಹುದು. ಆದರೆ, ಇದು ಅನಿವಾರ್ಯವಾಗಿದೆ. ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಟ್ರಾನ್ಸ್ಪೋರ್ಟ್ ಮಾಲೀಕರೆಲ್ಲರೂ ಕಷ್ಟದಲ್ಲಿದ್ದೇವೆ. ಗುತ್ತಿಗೆದಾರರ ಸಂಘದ ವತಿಯಿಂದ ತೀರ್ಮಾನ ತೆಗೆದುಕೊಂಡು ಜುಲೈ ೫ರಿಂದಲೇ ನಾವು ಸಾಗಣೆಯನ್ನು ನಿಲ್ಲಿಸಿದ್ದೇವೆ. ನಮ್ಮ ಬಿಲ್ ಪಾವತಿಯಾಗುವವರೆಗೂ ಮುಷ್ಕರ ಮುಂದುವರೆಸುತ್ತೇವೆ. ಆದ್ದರಿಂದ ಸರ್ಕಾರ ಕೂಡಲೇ ಬಾಕಿ ಉಳಿದಿರುವ ಸಾಗಣೆ ಬಿಲ್ ಮೊತ್ತ ಪಾವತಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಪಡಿತರ ಸಾಗಾಣಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಜಗದೀಶ್, ಮಹೇಶ್, ಧರ್ಮೇಗೌಡ, ವಿಜಯಕುಮಾರ್, ಬಿ.ಎಸ್. ಮಂಜುನಾಥ್ ಇದ್ದರು.