google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಾನವೀಯ ಸಂಪರ್ಕಕ್ಕೆ ಹೆಸರು ವಾಸಿಯಾದ ನಾರಾಯಣ್ ಅವರು ಸಮಾಜದ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿಯ ವತಿಯಿಂದ  ಏರ್ಪಡಿಸಿದ್ದ ಡಾ. ಪಿ. ನಾರಾಯಣ ಅವರಿಗೆ ‘ಜನವೈದ್ಯ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಔಷಧಿಯ ಜೊತೆಗೆ ರೋಗಿಯಲ್ಲಿ ಅದಮ್ಯವಾದ ಆತ್ಮವಿಶ್ವಾಸ ಹುಟ್ಟಿಸುವ ಸಹೃದಯಿ ವೈದ್ಯ ನಾರಾಯಣ್. ಇಂದಿನ ವಾಣಿಜ್ಯಕರಣದ ಯುಗದಲ್ಲಿ ವೈದ್ಯರು ರೋಗಿಯೊಂದಿಗೆ ಮಾತನಾಡುವ ಕ್ರಮವೇ ಬದಲಾಗಿದೆ. ವೈದ್ಯ ಮತ್ತು ರೋಗಿಯ ಸಂಬಂಧಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಲಾಗಿದೆ‌. ಗೂಗಲ್ ನೊಂದಿಗೆ ಮಾತನಾಡಿದ ಅನುಭವ ಈಗಿನ ವೈದ್ಯರಲ್ಲಿ ಕಾಣುತ್ತಿದೆ‌. ರೋಗಿಯಲ್ಲಿ ಆತ್ಮಸ್ಥೈರ್ಯ ತುಂಬುವ ವಾತಾವರಣ ಕುಂಟಿತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಾರಾಯಣ್ ಅವರಂತಹ ವೈದ್ಯರ ಅವಶ್ಯಕತೆ ತುರ್ತಾಗಿದೆ.

ಕುಟುಂಬ ವೈದ್ಯರು ಎಂಬ ಕಲ್ಪನೆಗಳು ಬದಲಾಗುತ್ತಿದೆ. ಒಂದು ಸಲ ಆಸ್ಪತ್ರೆ ಒಳಗೆ ಹೋದರೆ, ಎಲ್ಲಾ ಪರೀಕ್ಷೆಗಳನ್ನು ಮುಗಿಸಿ, ಯಾವುದೇ ರೋಗವಿಲ್ಲ ಎಂದು ವರದಿ ಬರುವುದರೊಳಗೆ, ಜೇಬೆಲ್ಲ ಖಾಲಿಯಾಗಿರುತ್ತದೆ. ಇಂಥಹ ಹೊತ್ತಿನಲ್ಲಿ ರೋಗಿಯ ಅಂತರಾಳದಲ್ಲಿ ಸ್ಥೈರ್ಯತೆ ಶಕ್ತಿ ಬಿತ್ತುವ ಕಾರ್ಯಕ್ಕೆ, ನಾರಾಯಣ್ ಅವರಂತಹ ವೈದ್ಯರಿಂದ ಪ್ರೇರಣೆ ಪಡೆಯಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರೀಶಂಕರ್ ಮಾತನಾಡಿ, ಕುಟುಂಬದ ವೈದ್ಯರೊಂದಿಗಿನ ಆತ್ಮೀಯತೆ ನಿಜಕ್ಕೂ ನಮಗೆ ಸಂಜೀವಿನಿ. ಸಮಾಜದಲ್ಲಿ ಇಂದು ಎಷ್ಟು ಹದಗೆಟ್ಟಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಹೊಸ ತಲೆಮಾರಿನ ಮಕ್ಕಳಿಗೆ ಯಾವ ಆದರ್ಶಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಅಂತಹ ಆತಂಕಗಳ ನಡುವೆ ಭರವಸೆಯ ಬೆಳಕಾಗಿ ನಿಲ್ಲುವವರು ನಾರಾಯಣ ಅವರಂತಹ ವ್ಯಕ್ತಿತ್ವಗಳು ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಮಾಜ ಕಂಡ ಅದ್ಭುತ ಯೋಜಕ ನಾರಾಯಣ್ ಅವರು. ಶಂಕರ ಮಠದ ಒಡನಾಟ ಅತ್ಯಂತ ಪ್ರಭಾವಯುತ ವ್ಯಕ್ತಿತ್ವ ನಿರ್ಮಾಣವಾಗಲು ಅವರಿಗೆ ಸಾಧ್ಯವಾಯಿತು. ಸಂಬಂಧ, ಸ್ನೇಹಯುತ ಸಮಾಜದ ಸಜ್ಜನ ಎಂಬ ಹೆಗ್ಗಳಿಕೆ ಅವರದು ಎಂದು ಹೇಳಿದರು.

ಅಭಿನಂದನಾ ಸಮಿತಿ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ.ಪಿ.ನಾರಾಯಣ್‌ ಉಪಸ್ಥಿತರಿದ್ದರು. ರಶ್ಮೀ ಕಾರಂತ್ ಪ್ರಾರ್ಥಿಸಿ, ಎ.ಎಸ್.ಕೃಷ್ಣಮೂರ್ತಿ ವಂದಿಸಿ, ತುರವನೂರು ಮಲ್ಲಿಕಾರ್ಜುನ ನಿರೂಪಿಸಿದರು.

Leave a Reply

Your email address will not be published. Required fields are marked *