ಶಿವಮೊಗ್ಗ: ಕೆಲಸದ ಒತ್ತಡದ ನಡುವೆಯೂ ಋಣಾತ್ಮಕ ಚಿಂತನೆ ಮಾಡುವ ಶಕ್ತಿ ಪತ್ರಕರ್ತರಲ್ಲಿ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಪ್ರತಿಷ್ಠಿತ ಮೆಟ್ರೊ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲಿನಿಕ್ ಮತ್ತು ಕ್ರಿಷ್ ಕಿಡ್ನಿ ಕೇರ್ ಸೆಂಟರ್ ಸಹಭಾಗಿತ್ವದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಯಾವುದೇ ಕ್ಷೇತ್ರವಿರಲಿ. ಆರೋಗ್ಯಕರ ವಾತಾವರಣ ಇರಬೇಕು. ವಿಶೇಷವಾಗಿ ವೈದ್ಯ ಕ್ಷೇತ್ರ, ರಾಜಕಾರಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಒತ್ತಡ ಇರುವುದನ್ನು ಕಾಣುತ್ತೇವೆ. ಶಿಕ್ಷಕ ಮತ್ತು ಆರೋಗ್ಯ ಕ್ಷೇತ್ರಗಳು ಬಹು ಮುಖ್ಯವಾಗುತ್ತವೆ. ಆರೋಗ್ಯವಿದ್ದರೆ ಸಂಪತ್ತು. ಆದರೆ ಇಂದಿನ ಕಲಬೆರಕೆ ಆಹಾರ ಸೇವನೆಯಿಂದ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಅವು ಬೇಗ ವಾಸಿಯಾಗಲು ಔಷಧ ಸೇವನೆ ಮಾಡುತ್ತೇವೆ. ಅದು ಅಡ್ಡ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತವೆ. ಈ ಸಂದರ್ಭದಲ್ಲಿ ವೈದ್ಯರ ಪಾತ್ರವೂಮುಖ್ಯವಾಗುತ್ತದೆ ಎಂದರು.
ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಮನುಷ್ಯನಲ್ಲಿ ಎಷ್ಟೇ ಹಣವಿದ್ದರೂ ಅವನು ಆರೋಗ್ಯವಾಗಿಲ್ಲದಿದ್ದರೆ ಆ ಹಣ ಸಂಪತ್ತು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ದಿನದ ೨೪ ಗಂಟೆಯೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಒತ್ತಡಗಳ ಮಧ್ಯೆಯೂ ಕೆಲಸ ಮಾಡುವ ಪತ್ರಕರ್ತರಿಗೆ ಆರೋಗ್ಯ ವಿಮೆ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾವು ಹಾಗೂ ಶಾಸಕಿ ಬಲ್ಕಿಶ್ ಬಾನು ಮಾತನಾಡುವುದಾಗಿ ಆಶ್ವಾಸನೆ ನೀಡಿದರು.
ತಜ್ಞ ವೈದ್ಯರಾದ ಡಾ. ಮಹೇಶಮೂರ್ತಿ, ಡಾ. ದಯಾನಂದ, ಡಾ. ನಾಗಮಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನಕುಮಾರ್ ಹಾಗೂ ಸಂಘದ ಪದಾಧಿಕಾರಿಗಳಿದ್ದರು.