google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅಭಿವದ್ಧಿ ಪರ್ವದತ್ತ ದಾಪುಗಾಲು ಇಡುತ್ತಿದೆ. ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿಗೆ ಕೇಂದ್ರ ಸರ್ಕಾರ ಆಡಳಿತ ತಂದು 11 ವರ್ಷ ಪೂರೈಸಿದ್ದು, ದೇಶವು ಬಡತನದ ವಿರುದ್ಧ ಹೋರಾಟದಲ್ಲಿ ಗೆದ್ದು ಸರ್ಕಾರದ ಸರ್ವಾಂಗೀಣ ಸಾಧನೆಗಳ ಕಾರಣದಿಂದಾಗಿ ಭಾರತ ಇನ್ನು ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕತೆಯಾಗಿ ಬಲಿಷ್ಠವಾಗಿದೆ ಎಂದರು.

ದೇಶದ 155 ಕೋಟಿ ಜನಸಂಖ್ಯೆಯ ದೇಶದಲ್ಲೀಗ ಇರುವ ಕಡು ಬಡವರ ಸಂಖ್ಯೆ 40 ಕೋಟಿ ಆಗಿದೆ. ನರೇಂದ್ರಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ ಎಂದ ಅವರು, ಮೋದಿ ಅವರು ತಮ್ಮ ವರ್ಚಸ್ಸಿನ ಕಾರಣಕ್ಕಾಗಿ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಂಡಿದ್ದಾರೆ ಎಂದರು.

ದೇಶದಲ್ಲಿ ಸ್ವಚ್ಛತೆಯಲ್ಲಿ ಆದ್ಯತೆಯಾಗಿ ಇರಿಸಿಕೊಂಡು ಹಲವು ಯೋಜನೆಗಳನ್ನು ಹಾಕಿಕೊಂಡು ಸ್ವಚ್ಛತೆಯ ಬಗ್ಗೆ ರಾಷ್ಟ್ರವ್ಯಾಪಿ ಜಗೃತಿ ಮೂಡಿಸಿದ ಪರಿಣಾಮ ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣವಾಗಿದೆ. ಯೋಜನೆಯ ಫಲ ಎಂಬಂತೆ ದೇಶದ ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ಏಕರೂಪ ತೆರಿಗೆ ವ್ಯವಸ್ಥೆಯನ್ನು ಮೋದಿಯವರು ಸವಾಲಾಗಿ ಸ್ವೀಕರಿಸಿ, ಆರಂಭದಲ್ಲಿ ಎಡರು-ತೊಡರುಗಳನ್ನು ನಿಭಾಯಿಸಿ ಇಂದು ಜಿಎಸ್‌ಟಿ ವ್ಯವಸ್ಥೆ ಬಹಳ ಸುಲಲಿತವಾಗಿ ನಡೆಯುವಂತೆ ಮಾಡಿ, 2008ರಲ್ಲಿ ಮಾಸಿಕ 60ಸಾವಿರ ಕೋಟಿ ಇದ್ದ ಜಿಎಸ್‌ಟಿ ವರಮಾನ ಸಂಗ್ರಹ 2025ರ ಏಪ್ರಿಲ್‌ನಲ್ಲಿ ದಾಖಲೆಯ 2.37 ಲಕ್ಷ ಕೋಟಿ ಆಗಿದೆ ಎಂದರು.

ಇಂದು ದೇಶದ ಜಿಡಿಪಿ ಬೆಳವಣಿಗೆ ದರವು ಶೇ.6.5ರ ಆಸುಪಾಸಿನಲ್ಲಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ ಎಂಬ ಹಿರಿಮೆ ಕಾಪಾಡಿಕೊಂಡಿದೆ. 2025-26ರ ಕೇಂದ್ರ ಬಜೆಟ್‌ನ ತೆರಿಗೆ ವರಮಾನ ಸಂಗ್ರಹ 34.5 ಲಕ್ಷ ಕೋಟಿ ಇದೆ. ಈ ಅವಧಿಗೆ ಸರ್ಕಾರವು ಮೂಲ ಸೌಕರ್ಯಕ್ಕಾಗಿ ದಾಖಲೆಯ 11 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮೇಯರ್ ಶಂಕರ್‌ಗನ್ನಿ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಶಾಲು ಹಾಕುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಅಶೋಕ್ ನಾಯಕ್, ಪ್ರಮುಖರಾದ ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಟಿ.ಡಿ.ಮೇಘರಾಜ್, ದೀನದಯಾಳ್, ಎಸ್. ಜನೇಶ್ವರ್, ಸಿ.ಎಸ್. ಮಾಲತೇಶ್, ಹರಿಕೃಷ್ಣ, ಎಸ್.ರಮೇಶ್, ವಿನ್ಸೆಂಟ್ ರೋಡ್ರಿಗಸ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *