google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಜಲಾಶಯದಿಂದಲೇ ನೀರನ್ನು ಸರಬರಾಜು ಮಾಡಬೇಕೇ ಹೊರತು, ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಕಾಲುವೆಯ ಮೂಲಕ ನೀರನ್ನು ಹರಿಸಬಾರದು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ಸುಮಾರು 1166 ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಭದ್ರಾ ಜಲಾಶಯದಿಂದ ನೀರು ಸರಬರಾಜು ಮಾಡಲು ಜಕ್‌ವೆಲ್‌ಗೆ ನೀರು ಸಂಗ್ರಹಿಸಬೇಕಾಗಿದೆ. ಆದರೆ ಭದ್ರಾ ಜಲಾಶಯದಿಂದ ಜಕ್‌ವೆಲ್‌ಗೆ ನೀರು ಹರಿಸುವುದನ್ನು ಬಿಟ್ಟು ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಜಕ್‌ವೆಲ್‌ಗೆ ನೀರು ಹರಿಸುತ್ತಿರುವುದು ಅವೈಜನಿಕವಾಗಿದೆ. ಹೀಗೆ ಕಾಲುವೆಯನ್ನು ಸೀಳುವುದರಿಂದ ಕಾಲುವೆಯಲ್ಲಿನ ನೀರಿನ ರಭಸ ಇಲ್ಲವಾಗಿ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹಾಯುವುದು ಸಾಧ್ಯವೇ ಇಲ್ಲವಾಗಿದೆ ಎಂದರು.

ಭದ್ರಾ ಕಾಲುವೆ ಪ್ರಮುಖವಾಗಿ ಅಚ್ಚುಕಟ್ಟುದಾರರ ಬೆಳೆಗಳಿಗೆ ನೀರುಣಿಸಲು ಇರುತ್ತದೆ. ಈಗಲೇ ಕೊನೆಯ ಭಾಗದ ರೈತರಿಗೆ ನೀರು ತಲುಪುವುದು ಕಷ್ಟವಾಗುತ್ತಿರುವಾಗ ಇದರ ಮಧ್ಯೆ ಭದ್ರಾ ಕಾಲುವೆಯನ್ನು ಸೀಳಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ತೆಗೆದುಕೊಂಡು ಹೋದರೆ ರೈತರಿಗೆ ನೀರು ಇಲ್ಲದಂತಾಗುತ್ತದೆ. ಈ ಅವೈಜನಿಕ ಯೋಜನೆ ಮತ್ತು ತೀರ್ಮಾನದಿಂದ ರೈತರು ತುಂಬಾ ಆತಂಕದಲ್ಲಿದ್ದಾರೆ. ಒಮ್ಮೆ ನಾಲೆಗೆ ಬಿಟ್ಟ ನೀರನ್ನು ನಡುವೆಯೇ ಈ ರೀತಿ ಬೇರೆ ಕಡೆ ವರ್ಗಾಯಿಸಿದರೆ ನೀರು ಮುಂದಕ್ಕೆ ಹೋಗುವುದಾದರೂ ಹೇಗೆ ಎಂದರು.

ಕುಡಿಯವ ನೀರಿನ ಯೋಜನೆಗೆ ನೀರು ಹರಿಸುವುದು ತಪ್ಪಲ್ಲ. ನೀರನ್ನು ಬಿಡುವುದು ನಮ್ಮ ಧರ್ಮ. ಆದರೆ ಈ ನೀರನ್ನು ಹೇಗೆ ಬಿಡಬೇಕು ಎಂಬ ತೀರ್ಮಾನ ಬಹಳ ಮುಖ್ಯ. ನಾಲೆಯಿಂದ ನೀರು ಬಿಡುವ ಬದಲು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಆಗ ಯಾವ ತೊಂದರೆಯೂ ಇರುವುದಿಲ್ಲ. ಆದ್ದರಿಂದ ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ಅಣೆಕಟ್ಟಿನಿಂದ ನೇರವಾಗಿ ಜಕ್‌ವೆಲ್ ನೀರು ಹರಿಸಲಿ. ಅದರಲ್ಲೂ ಅಣೆಕಟ್ಟಿನಿಂದ ಸ್ವಲ್ಪ ದೂರದ ಕಾಲುವೆಯಿಂದಲೇ ನಾಲೆಯನ್ನು ಸೀಳಲಾಗಿದೆ ಎಂದು ಆರೋಪಿಸಿದರು.

ಇದು ಕೇವಲ ಗುತ್ತಿಗೆದಾರನ ಹಣ ಉಳಿಸಲು ಮಾಡಿರುವ ಅತ್ಯಂತ ಕೆಟ್ಟ ಯೋಚನೆ ಮತ್ತು ಯೋಜನೆಯಾಗಿದೆ. ಭದ್ರಾ ಬಲದಂಡೆ ಕಾಲುವೆಯಲ್ಲಿ ರೈತರ ಜೀವ-ಜೀವನವೇ ಇದೆ. ಆದ್ದರಿಂದ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಈ ಅವೈಜನಿಕ ಯೋಜನೆಯನ್ನು ನಿಲ್ಲಿಸಬೇಕಾಗಿದೆ. ನೀರಾವರಿ ಮಂತ್ರಿಯೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ತಕ್ಷಣವೇ ಇದರ ಬಾದಕಗಳನ್ನು ಗಮನಿಸಿ, ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ರೈತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಪುಟ್ಟಪ್ಪ ಕೆ.ಎಸ್., ಸೀನಪ್ಪ ಹಾರೋಬೆನವಳ್ಳಿ, ಮಂಜುನಾಥೇಶ್ವರ, ಬಸವರಾಜ್ ಎಮ್ಮೆಹಟ್ಟಿ, ಕೃಷ್ಣಮೂರ್ತಿ ಅಗಸವಳ್ಳಿ, ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *