
ಶಿವಮೊಗ್ಗ :- ರಾಜ್ಯದ ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆಯ ಫಲ ಸಿಗಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಇಂದಿನಿಂದ ಶಿವಮೊಗ್ಗ-ಬೊಮ್ಮನಕಟ್ಟೆ, ಭದ್ರಾವತಿ ಮಾರ್ಗದಲ್ಲಿ ಆರಂಭವಾದ ಸರ್ಕಾರಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬೊಮ್ಮನಕಟ್ಟೆಗೆ ಸರ್ಕಾರಿ ನಗರ ಸಾರಿಗೆ ಸಂಚಾರದ ಅಗತ್ಯತೆ ಇದೆ ಎಂದು ಯುವ ಮುಖಂಡ ಚೇತನ್ ಮತ್ತವರ ತಂಡದ ಬಹುದಿನದ ಬೇಡಿಕೆಯಾಗಿತ್ತು. ಆ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಸರ್ಕಾರ ಇಂದು ಬೊಮ್ಮನಕಟ್ಟೆ ಜೊತೆಗೆ ಇನ್ನೂ ಬೇರೆ ಬೇರೆ ಗ್ರಾಮಾಂತರ ಪ್ರದೇಶಗಳಿಗೂ ಸರ್ಕಾರಿ ಬಸ್ ವ್ಯವಸ್ಥೆ ಮಾಡುತ್ತಿದೆ. ಸರ್ಕಾರ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಪಂಚ ಗ್ಯಾರೆಂಟಿ ಯೋಜನೆಗಳನ್ನು ನಿಯತ್ತಾಗಿ ಅನುಷ್ಠಾನಕ್ಕೆ ತಂದಿದೆ ಎಂದರು.
ಬಡವರ ಬಗ್ಗೆ ನನ್ನ ಅಪ್ಪಾಜಿ ಎಸ್.ಬಂಗಾರಪ್ಪನವರು ಹೊಂದಿದ್ದ ದೂರದರ್ಶಿತ್ವದ ಪರಿಣಾಮವೇ ದೇಶದಲ್ಲೇ ಪ್ರಥಮ ಬಾರಿಗೆ ಆಶ್ರಯ ಬಡಾವಣೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಅವತ್ತು ಆಶ್ರಯ ನಿವೇಶನ ಪಡೆದವರು ಇಂದು ತಮ್ಮ ಹತ್ತಿರ ಬಂದು ನನ್ನ ತಂದೆಯವರ ಬಡವರ ಕಾಳಜಿಯನ್ನು ಸ್ಮರಿಸಿದರು ಎಂದರು.
ಬಳಿಕ ಸಚಿವರು ಅಲ್ಲಿಯೇ ಇರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ಅಲ್ಲೇ ಇರುವ ಶ್ರೀ ಮಾತಾ ವಿದ್ಯಾ ಮಂದಿರದ ಚಿಣ್ಣರೊಂದಿಗೆ ಮಾತುಕತೆ ನಡೆಸಿದರು.
ಕೆಎಸ್ ಆರ್ ಟಿಸಿ ಡಿಟಿಒ ದಿನೇಶ್, ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಎಚ್.ಸಿ.ಯೋಗೀಶ್, ಎನ್. ರಮೇಶ್, ವಿಜಯಲಕ್ಷ್ಮಿ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಖಲೀಂ ಪಾಷ, ಕಾಂಗ್ರೆಸ್ ಮುಖಂಡರಾದ ಕೆ. ಚೇತನ್, ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಚರಣ್, ಜಿಲ್ಲಾ ಎನ್.ಎಸ್.ಯು .ಐ ಅಧ್ಯಕ್ಷ ವಿಜಯ್, ಜಿಲ್ಲಾ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಿರೀಶ್, ವಾರ್ಡ್ ಅಧ್ಯಕ್ಷರಾದ ಕಾಂತರಾಜ್, ಮಾಲತೇಶ್, ತಂಗರಾಜ್, ಧೀರರಾಜ್ ಹೊನ್ನವಿಲೆ, ವಿಶ್ವನಾಥ್ ಕಾಶಿ, ರವಿಕುಮಾರ್, ಲಿಂಗರಾಜು, ಕಾರ್ತಿಕ್, ನರಸಿಂಹ, ಅನಂತು, ಶಿವು ಮತ್ತಿತರರು ಉಪಸ್ಥಿತರಿದ್ದರು.
