
ಶಿವಮೊಗ್ಗ :- ಸಾಹಿತ್ಯಾತ್ಮಕ ಬರವಣಿಗೆ, ಅಧ್ಯಯನದಂತಹ ಕ್ರಿಯಾಶೀಲತೆಯ ಸಂಗಮವಾದ ಸಾಹಿತ್ಯ ಗ್ರಾಮ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಇಂದು ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರೂಪಿಸಿರುವ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಸ್ಮಾರಕ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಂಗಾರಪ್ಪಅವರ ಹೆಸರಿನಲ್ಲಿ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯದ ಮೂಲಕ, ಕನ್ನಡ ಸಾಹಿತ್ಯ ಪರಿಷತ್ತು ಬಂಗಾರಪ್ಪ ಅವರಿಗೆ ದೊಡ್ಡ ಗೌರವ ನೀಡಿದೆ. ಸಾಹಿತ್ಯ ಗ್ರಾಮ ಯೋಜನೆಯು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಿ. ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಾಜದ ಉನ್ನತಿಯ ಕುರಿತಾಗಿ ಚರ್ಚಿಸುವ ಚಿಂತಕರ ಚಾವಡಿಯಾಗಿ ರೂಪಗೊಳ್ಳಲಿ. ಅಂತಹ ಸೃಜನಶೀಲ ಚಿಂತನೆಗಳ ಮೂಲಕ ಯುವ ಸಮೂಹಕ್ಕೆ ಸಾಹಿತ್ಯ ಬರವಣಿಗೆಯ ಮಾರ್ಗದರ್ಶನದ ಕೇಂದ್ರವಾಗಿ, ಪ್ರೇರಣೀಯ ವೇದಿಕೆಯಾಗಲಿ ಎಂದು ಆಶಿಸಿದರು.
ಕರ್ನಾಟಕ ಸರ್ಕಾರ ಸಾಹಿತಿಗಳಿಗೆ ಹೆಚ್ಚು ಬಲ ತುಂಬುವ ಕೆಲಸ ಮಾಡುತ್ತಿದೆ. ಸೃಜನಶೀಲ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚು ಪೂರಕ ವಾತಾವರಣ ನಿರ್ಮಾಣ ಮಾಡುವತ್ತ ಕಾಳಜಿ ತೋರುತ್ತಿದೆ. ಈಚೆಗೆ ಸರ್ಕಾರದಿಂದ ಏರ್ಪಡಿಸಿದ್ದ ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಆದರ್ಶ ಕಾರ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದ್ದೇವೆ.

ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ ಜೀವನ ಚರಿತ್ರೆ ಪುಸ್ತಕದತ್ತ ಚಿತ್ತ ಹರಿಸಿದ ಸಚಿವ ಮಧು ಬಂಗಾರಪ್ಪ, ಪುಸ್ತಕ ಕೈಗೆತ್ತಿಕೊಂಡು ಪ್ರತಿಗಳನ್ನು ಮೆಲುಕು ಹಾಕುತ್ತ, ಪುಸ್ತಕ ನಿರ್ಮಾಣ ಕಾರ್ಯದಲ್ಲಿ ತಾವು, ಶಿವರಾಜ್‌ಕುಮಾರ್, ಪುನಿತ್ ರಾಜಕುಮಾರ್ ಅವರು ತೊಡಗಿಸಿಕೊಂಡ ಸಂದರ್ಭ ನೆನೆದರು. ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಬರೆದಿರುವ ಈ ಪುಸ್ತಕವು, ಡಾ.ರಾಜ್‌ಕುಮಾರ್ ಕುರಿತಾಗಿ ಉನ್ನತ ಅಧ್ಯಯನ ನಡೆಸಲು ನೆರವಾಗಲಿದೆ ಎಂದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸಾಹಿತಿ ಪ್ರೊ. ವಿಜಯಾದೇವಿ, ಜಿ.ಡಿ. ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಎಂ.ನವೀನ್ ಕುಮಾರ್, ಡಿ.ಗಣೇಶ್, ಮಂಜಪ್ಪ, ಹುಚ್ಚರಾಯಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
