
ಶಿವಮೊಗ್ಗ :- ಅಂತರಯಾನಕ್ಕಾಗಿ ದೇಹ ದೇವಾಲಯವಾಗಬೇಕು. ದೇವಾಲಯಗಳು ಬಹಿರ್ಮುಖದಿಂದ ಅಂತರ್ಮುಖಿಯಾಗುವ ಜಗೃತಿ ಕೇಂದ್ರಗಳು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಹೊರಹೊಲಯದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು, ದೇವಾಲಯಗಳು ಜನರನ್ನು ಒಟ್ಟಿಗೆ ಸೇರಿಸುವ ಸಾಂಸ್ಕತಿಕ ಕೇಂದ್ರಗಳು. ಇದು ಧರ್ಮ, ದಾನ, ಶಾಂತಿ ಮತ್ತು ಸಹಾನುಭೂತಿಯ ಕೇಂದ್ರ. ಅನ್ನದಾನ, ಶಿಕ್ಷಣ, ಸೇವಾ ಕರ್ಮಗಳ ಕೇಂದ್ರ ಎಂದರು.
ಹಲವಾರು ದೇವಾಲಯಗಳು ಕೇವಲ ಪೂಜ ಸ್ಥಳವಲ್ಲ; ಅವು ಸಮಾಜಕ್ಕೆ ಸೇವೆ ಸಲ್ಲಿಸುವ ಸಂಸ್ಥೆಗಳಾಗಿ ಪರಿವರ್ತನೆಗೊಂಡಿವೆ. ಈ ಸೃಷ್ಟಿಯಲ್ಲಿ ಅತ್ಯಂತ ಅದ್ಭುತವಾದ ಸೃಷ್ಟಿಯಾಗಿರುವುದು ಮನುಷ್ಯ ದೇಹ. ಇದು ಕೇವಲ ಮಾಂಸದ ರೂಪವಲ್ಲ, ದೇಹದೊಳಗೆ ಆತ್ಮನಿರುವ ಕಾರಣದಿಂದ ಅದು ಚೇತನವಾಗಿರುತ್ತದೆ. ಆತ್ಮವೇ ಪರಮಾತ್ಮನ ಭಾಗ. ಇದು ಆತ್ಮನ ನಿವಾಸ, ಜನ ಚೇತನ, ಪ್ರಾಣಶಕ್ತಿ ಹಾಗೂ ದೇವಸ್ಮರಣೆಗಾಗಿ ಯೋಗ್ಯವಾದ ಅವಯವಗಳ ಸಮೂಹ. ಆದ್ದರಿಂದ ದೇಹವೇ ನಿಜವಾದ ದೇವಾಲಯ. ದೇಹವನ್ನು ಪವಿತ್ರವಾಗಿ, ಶುದ್ಧವಾಗಿ, ಸಾತ್ವಿಕವಾಗಿ ಇಡುವುದು ದೇವನಿಗೆ ಸಮರ್ಪಣೆಗೊಂದು ರೂಪ ಎಂದರು.

ದೇವರು ದೇಹವನ್ನು ದೇವಾಲಯವನ್ನಾಗಿ ನಿರ್ಮಿಸಿದನು ಆತ್ಮನ ನಿವಾಸವಾಗಿ. ಮಾನವನು ದೇವಾಲಯವನ್ನು ನಿರ್ಮಿಸಿದನು ದೇವವರನ್ನು ಸ್ಮರಿಸುವ ದರ್ಶನ ಸ್ಥಳವಾಗಿ. ಒಂದು ಆಂತರಿಕ ಯಾತ್ರೆ, ಇನ್ನೊಂದು ಬಾಹ್ಯ ಯಾತ್ರೆ. ಎರಡೂ ಅಗತ್ಯ. ಎರಡೂ ಪವಿತ್ರ. ದೇಹದೊಳಗಿನ ದೇವನನ್ನು ಅರಿಯುವುದು ತಪಸ್ಸು, ದೇವಾಲಯದಲ್ಲಿನ ದೇವನನ್ನು ನೆನೆಯುವುದು ಭಕ್ತಿ. ಎರಡೂ ದಾರಿಗಳು ಒಂದೇ ತಾಣವನ್ನೇ ತಲುಪುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಕುಂಬಾರ ಗುರುಪೀಠದ ಗುಂಡಯ್ಯ ಶ್ರೀಗಳು, ಬಂಜರ ಗುರುಪೀಠದ ಸೇವಾಲಾಲ್ ಶ್ರೀಗಳು ಶಿಕಾರಿಪುರದ ಚನ್ನಬಸವ ಶ್ರೀಗಳು ಆಶೀರ್ವಚನ ದಯಪಾಲಿಸಿದರು. ಹೊಂಗಿರಣ ಲೋಕೇಶ ಅಧ್ಯಕ್ಷತೆವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್ ರವಿಕುಮಾರ, ನಿಗಮದ ಮಾಜಿ ನಿರ್ದೇಶಕ ದೇವಿಕುಮಾರ, ನಿವೃತ್ತ ನ್ಯಾಯಧೀಶ ವೀರಭದ್ರಪ್ಪ ಪೂಜರ, ಉದ್ಯಮಿ ಹೊಳಲೂರು ಸಂತೋಷ, ಬೂದಿಗೆರೆ ಬಸವರಾಜ ಮಾತನಾಡಿದರು. ದೇವಾಲಯದ ಪದಾಧಿಕಾರಿಗಳಾದ ಮಂಜಪ್ಪ ಎಂ, ಕೇಶವ್‌ಮೂರ್ತಿ ಬಿ, ಪಾಲಾಕ್ಷಪ್ಪ ಹೆಚ್, ತಿಮ್ಮಪ್ಪ ಡಿ, ವೀರಭದ್ರಪ್ಪ ಎಂ.ಡಿ, ಸುರೇಶ್ ಡಿ, ಮಂಜಪ್ಪ ಡಿ, ಜಯಪ್ಪ ಎನ್ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.
ಸಮಾರಂಭದ ನಿಮಿತ್ತ ಸ್ವಗ್ರಾಮದ ಪುರುಷ ಹಾಗೂ ಮಹಿಳಾ ಗ್ರಾಮೀಣ ಕ್ರೀಡಾಕೂಟಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿ ಉತ್ಸವ ಜನಪದ ಕಲಾತಂಡಗಳು ಹಾಗೂ ಡಿಜೆಯೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.
