
ಶಿವಮೊಗ್ಗ :- ಸರಸ್ವತಿ ಪೂಜೆಯ ಘಂಟಾನಾದ ಮೊಳಗುತ್ತಿದ್ದಂತೆ, ದೇಸಿ ಉಡುಗೆಯಲ್ಲಿ ಒಂದೆಡೆ ಸೇರಿದ ವಿದ್ಯಾರ್ಥಿಗಳು, ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದ ಶೈಕ್ಷಣಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಶಕ್ತಿ ನೀಡುವಂತೆ ಭಕ್ತಿ ಭಾವದಿಂದ ಪ್ರಾರ್ಥಿಸಿದರು. ಪೂಜೆಯ ಹಿಂದೆಯೇ ಶುರುವಾದ ಡೊಳ್ಳಿನ ಶಬ್ದಕ್ಕೆ ಸಂಭ್ರಮದಿಂದ ಹೆಜ್ಜೆ ಹಾಕಿ ನರ್ತಿಸಿದರು.

ಇಂತಹ ವಿದ್ಯಾರ್ಥಿಗಳ ಸ್ನೇಹ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ನಗರದ ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಆವರಣ. ನಿನ್ನೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನದಲ್ಲಿ ವಿದ್ಯಾರ್ಥಿಗಳು ದೇಸಿಯ ಉಡುಗೆಯಲ್ಲಿ ಮಿಂಚಿದರು.
ಪುಸ್ತಕಗಳನ್ನು ಜೋಡಿಸಿಟ್ಟು, ಸರಸ್ವತಿ ಮಾತೆಯ ಫೋಟೊವನ್ನು ಹಣ್ಣು ಹಂಪಲು, ಹೂವುಗಳಿಂದ ಅಲಂಕರಿಸಿದ್ದ ವಿದ್ಯಾರ್ಥಿಗಳು, ತಳಿರು, ತೋರಣ, ರಂಗೋಲಿ ಗಳಿಂದ ಇಡೀ ಕಾಲೇಜನ್ನು ಸಾಂಪ್ರ ದಾಯಿಕವಾಗಿ ಸಿಂಗರಿಸಿದ್ದರು. ಸೀರೆ, ಪಂಚೆ, ಶಲ್ಯದಲ್ಲಿ ಆಗಮಿಸಿದ್ದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿ ಗಳು ಪೂಜೆಯ ನಂತರ ಕಾಲೇಜು ಆವರಣದಲ್ಲಿಯೇ ಡೊಳ್ಳಿನ ಶಬ್ದಕ್ಕೆ ಕುಣಿಯುತ್ತ, ತಾವು ತಂದಿದ್ದ ಜೀಪು, ಬೈಕುಗಳಲ್ಲಿ ರೋಡ್ ಷೋ ನಡೆಸಿದರು. ಬಿಸಿಲ ಧಗೆಯನ್ನು ಲೆಕ್ಕಿಸದ ವಿದ್ಯಾರ್ಥಿಗಳು ಪರಸ್ಪರ ಅಭಿನಂದಿಸಿಕೊಳ್ಳುತ್ತಾ ಸೆಲ್ಫಿ ತೆಗೆದುಕೊಳ್ಳುತ್ತ ಉತ್ಸುಕತೆಯಿಂದ ಹೆಜ್ಜೆ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು. ಬಣ್ಣದ ಹೊಗೆ ಬಿಡುತ್ತಿದ್ದ ಸನ್ನೆಗೋಲುಗಳು, ಆಗಾಗ ಸಿಡಿಯು ತ್ತಿದ್ದ ಬಣ್ಣದ ಪೇಪರ್ ಚೂರುಗಳ ಪಟಾಕಿಗಳು ಸ್ಟೇಜ್ ಮೇಲಿನ ರ್‍ಯಾಂಪ್ ನಡಿಗೆಗೆ ಮತ್ತಷ್ಟು ಮೆರುಗು ನೀಡಿತು.
ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಪರೀಕ್ಷೆ ಮುಗಿದ ನಂತರ ಕಾಲೇಜು ದಿನಗಳು ಮುಗಿಯಿತೆಂಬ ಬೇಸರ ಛಾಯೆ ಯೊಂದು ಮೂಡಿದ್ದು ಮಾತ್ರ ಸುಳ್ಳಲ್ಲ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್ ಶಿವಪ್ರಸಾದ್, ಉಪನ್ಯಾಸಕರಾದ ವಿನುತ ಶೆಣೈ, ಗುರುರಾಜ್, ಸುಜಾತ, ಅರುಣ್ ಕುಮಾರ್, ಈಶ್ವರ್, ಚಂದನ್ ಸೇರಿದಂತೆ ಇನ್ನಿತರರಿದ್ದರು.
