ಇಂಡಿಯಾ ಒಕ್ಕೂಟ ಟೇಕಾಫ್ ಆಗಲು ಸಾಧ್ಯವೇ ಇಲ್ಲ : ಅಣ್ಣಾಮಲೈ

ಶಿವಮೊಗ್ಗ :- ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ. ಆಂಧ್ರಪ್ರದೇಶದಲ್ಲೂ ಕೂಡ ಕಾಂಗ್ರೆಸ್ ಗೆ ಮಹತ್ವವಿಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಇಂಡಿಯಾ ಒಕ್ಕೂಟ ಟೇಕಾಫ್ ಆಗಲು ಸಾಧ್ಯವೇ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಇಂಡಿಯಾ ಒಕ್ಕೂಟದ ಅನೇಕ ಸದಸ್ಯರುಗಳಲ್ಲಿಯೇ ಹೊಂದಾಣಿಕೆ ಇಲ್ಲವಾಗಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಜಗಳ ಪ್ರಾರಂಭವಾಗಿದೆ. ಸಿಪಿಐ, ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ. ರಾಹುಲ್ ಗಾಂಧಿ ಬಂಧನವಾಗುವ ಬಗ್ಗೆಯೇ ಮಾತುಕತೆಯಾಗುತ್ತಿದೆ. ಎಂದರು.

ಇದು ಲೋಕಸಭಾ ಚುನಾವಣೆ ಪಂಚಾಯಿತಿ ಚುನಾವಣೆಯಲ್ಲ, ಇದು ದೇಶದ ಚುನಾವಣೆ. ಜನ ಬುದ್ಧಿವಂತರಿರುತ್ತಾರೆ. ಯಾರು ಪ್ರಧಾನಿಯಾಗಬೇಕು ಎಂಬುದನ್ನು ಅವರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಮುಖಂಡರು ಪ್ರಧಾನಿ ಮೋದಿ ಅವರ ಬಗ್ಗೆ ಕೀಳುಮಟ್ಟದ ಮಾತನಾಡುತ್ತಿರುವುದು ಸರಿಯಲ್ಲ. ಪ್ರಧಾನಿ ಹುದ್ದೆಗೆ ಗೌರವ ಕೊಡಬೇಕು. ಜನರು ಇದನ್ನು ಗಮನಿಸುತ್ತಾರೆ. ಒಬ್ಬ ಪ್ರಧಾನಿ ಎಂದರೆ ಕೇವಲ ಆ ದೇಶದವರು ಮಾತ್ರ ಆಗಿರುವುದಿಲ್ಲ. ಇಡೀ ಪ್ರಪಂಚದ ಆಗುಹೋಗುಗಳ ಬಗ್ಗೆ ಅರಿವಿರಬೇಕಾಗುತ್ತದೆ. ಹಾಗಾಗಿಯೇ ಮೋದಿ ಅವರನ್ನು ಬಿಟ್ಟು ಬೇರೆ ಯಾರೂ ಪ್ರಧಾನಮಂತ್ರಿಯಾಗಲು ಸಾಧ್ಯವಿಲ್ಲ ಎಂದರು.

ಬರ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಬರ ಪರಿಹಾರವಾಗಲಿ, ನೆರೆ ಪರಿಹಾರವಾಗಲಿ ಅದನ್ನು ನೀಡಲು ಕೇಂದ್ರ ಸರ್ಕಾರಕ್ಕೆ ತನ್ನದೇ ಇತಿ ಮಿತಿಗಳಿವೆ. ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ಗಳ ಮೂಲಕ ಅದನ್ನು ನೀಡಬೇಕಾಗುತ್ತದೆ. ಹಾಗೆ ನೋಡಿದರೆ ಬಿಜೆಪಿ ಆಡಳಿತದಲ್ಲಿರುವ ಯಾವುದೇ ರಾಜ್ಯಗಳಿಗೂ ಹಣ ನೀಡಿಲ್ಲ. ನೆರವು ಕೇಳಲು ಸ್ನೇಹಿತನ ತರಹ ಹೋಗಬೇಕೆ ವಿನಹ ಪ್ರತಿಭಟನೆಯ ಮೂಲಕ ಅಲ್ಲ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಣ ನೀಡಲು ಒಪ್ಪಿದೆ. ನೀತಿ ಸಂಹಿತೆ ಜರಿಯಲ್ಲಿರುವುದರಿಂದ ಅದು ಮುಂದಕ್ಕೆ ಹೋಗಿದೆ ಅಷ್ಟೇ ಎಂದರು.

ಗ್ಯಾರಂಟಿಗಳಿಂದ ನಾವು ಗೆಲ್ಲುತ್ತೇವೆ ಎನ್ನುವುದು ಸುಳ್ಳು, ಬಿಜೆಪಿ ಬಗ್ಗೆ ಟೀಕೆ ಮಾಡುವವರಿಗೆ ಜೂನ್ ೪ ರಂದು ಉತ್ತರ ಸಿಗುತ್ತದೆ. ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಗೆಲುವು ಖಚಿತವಾಗಿದೆ. ಈಶ್ವರಪ್ಪನವರ ಸ್ಪರ್ಧೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಈ ಚುನಾವಣೆ ನಡೆಯುವುದು ಮೋದಿಗಾಗಿ. ಇದು ರಾಷ್ಟ್ರೀಯ ಚುನಾವಣೆ. ಜನರು ಸ್ಥಳೀಯ ನಾಯಕರನ್ನು ನೋಡುವುದಿಲ್ಲ. ರಾಷ್ಟ್ರೀಯ ನಾಯಕರನ್ನು ಮಾತ್ರ ನೋಡುತ್ತಾರೆ. ಕಣ್ಣುಮುಚ್ಚಿ ಕರ್ನಾಟಕದಲ್ಲಿ ಜನ ಬಿಜೆಪಿಗೆ ಓಟು ಹಾಕುತ್ತಾರೆ. ಕರ್ನಾಟಕದಲ್ಲಿ ೨೮ ಕ್ಷೇತ್ರಗಳಲ್ಲೂ ಎನ್.ಡಿ.ಎ. ಮೈತ್ರಿಕೂಟ ಗೆಲ್ಲಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಮುಖರಾದ ಎಸ್. ದತ್ತಾತ್ರಿ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ಗಣೇಶ್ ಬಿಳಕಿ, ಪೆರುಮಾಳ್, ಶಿವಕುಮಾರ್ ಇದ್ದರು.

Abhi

Abhi

Leave a Reply

Your email address will not be published. Required fields are marked *