ಗರ್ತಿಕೆರೆಯಲ್ಲಿ ಗೀತಕ್ಕ ಭರ್ಜರಿ ಮತ ಭೇಟೆ…

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ತಾಳಿ ಕಳೆದುಕೊಳ್ಳಬೇಕಾಗುತ್ತದೆ? ಎಂದು ಬಿಜೆಪಿ ಪಕ್ಷದ ಉನ್ನತ ಸ್ಥಾನದಲ್ಲಿರುವ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಇದು ಖಂಡನೀಯ ಎಂದು ಲೋಕಸಭಾ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

ಹೊಸನಗರ ತಾಲ್ಲೂಕಿನ ಗರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಳಿಯ ಮಹತ್ವ ಅರಿತು ಟೀಕೆಗಳಿಗೆ ಇಳಿಯಬೇಕು. ಭಾರತೀಯ ಸಂಸ್ಕ್ರತಿಯಲ್ಲಿ ತಾಳಿ, ಕಾಲುಂಗುರ, ಹಣೆಗೆ ಕುಂಕುಮ ಹೆಣ್ಣಿಗೆ ಸೂಕ್ಷ್ಮ ವಿಚಾರಗಳು. ಅದಕ್ಕೆ ಧಕ್ಕೆ ಉಂಟಾದರೆ, ಸಹಿಸಲಾಗದು. ಈ ರೀತಿಯ ಬೇಜವ್ದಾರಿಯುತ ಹೇಳಿಕೆ ನೀಡುವ ಮೊದಲು ಎಚ್ಚರ ವಹಿಸಬೇಕು ಎಂದರು.

ಕ್ಷೇತ್ರದಲ್ಲಿ ಬಿಜೆಪಿಗರಿಗೆ ಕೆಲಸ- ಕಾರ್ಯ ಕಮ್ಮಿಯಾಗಿದೆ. ಇಲ್ಲಿ, ನನ್ನ ವಿರುದ್ಧ ಆರೋಪಿಸಲು ಸೂಕ್ತ ಕಾರಣಗಳು ಸಿಗುತ್ತಿಲ್ಲ. ಆದ್ದರಿಂದ, ಅನಾವಶ್ಯಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ದುಮುಕಿದ್ದಾರೆ ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ರಾಜ್ಯಕ್ಕೆ ಬರಗಾಲದ ಛಾಯೆ ಆವರಿಸಿದೆ. ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇದಕ್ಕೆ ಸ್ಪಂದಿಸುವ ಮನೋಭಾವ ಈಶ್ವರಪ್ಪ ಕಳೆದುಕೊಂಡಿದ್ದಾರೆ. ಆದರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಹಣೆಯ ಕುಂಕುಮ ಅಳಸಿಕೊಂಡಿದ್ದಾರೆ ಎನ್ನುವ ಸುಳ್ಳು ಸುದ್ದಿ ದೊಡ್ಡದಾಗಿ ಕಂಡಿದೆ. ಇಲ್ಲಿ ರಾಜಕಾರಣ ಮಾಡಬೇಕು. ಅದನ್ನು ಬಿಟ್ಟು ಕೀಳು ಮಟ್ಟದ ರಾಜಕಾರಣಕ್ಕೆ ಈಶ್ವರಪ್ಪ ಇಳಿಯಕೂಡದು ಎಂದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕೇಂದ್ರ ಬಿಜೆಪಿ ನಾಯಕರಿಗೆ ಸೋಲಿನ ಭೀತಿ ಆವರಿಸಿದೆ. ಇಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ. ಅದೇ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ಟೀಕೆಗೆ ಮುಂದಾಗಿದ್ದಾರೆ. ಇದೆಲ್ಲದಕ್ಕೂ ಮತದಾರರು ಮತಕಟ್ಟೆಯಲ್ಲಿ ಉತ್ತರ ನೀಡಬೇಕು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನಟ ಶಿವರಾಜಕುಮಾರ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ, ಟಿ.ಎಲ್.ಸುಂದರೇಶ್, ಕಡ್ತೂರು ದಿನೇಶ್, ಬಂಡಿ ರಾಮಚಂದ್ರ, ಧರಣೇಶ್ ಮಳಿಲಿಕೊಪ್ಪ, ಜೀತೇಂದ್ರ ಗೌಡ, ಶ್ವೇತಾ ಬಂಡಿ ಮತ್ತಿತರರು ಇದ್ದರು.

Abhi

Abhi

Leave a Reply

Your email address will not be published. Required fields are marked *