ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಕಾಗೋಡು ತಿಮ್ಮಪ್ಪರಿಂದ ಗೋಶಾಲೆ ಉದ್ಘಾಟನೆ

ಸಾಗರ :- ಗ್ರಾಮೀಣ ಭಾಗದಲ್ಲಿ ಗೋ ಸಾಕಾಣಿಕೆ ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ತಾಲ್ಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗೋಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಶಾಲೆ ನಿರ್ಮಾಣ ಸಂಸ್ಕತಿ ಕಟ್ಟುವ ಕೆಲಸವಾಗಿದ್ದು ಚರಕ ಸಂಸ್ಥೆ ಸಮುದಾಯದತ್ತ ಹೊರಳುತ್ತಿರುವುದರ ಸೂಚಕವಾಗಿದೆ. ಇದುವರೆಗೂ ಚರಕ ಮೂಲಕ ಕೈಮಗ್ಗ ಉತ್ಪನ್ನಗಳಿಗೆ ಸಂಬಂಧಿಸಿದ ಚಟುವಟಿಕೆಗೆ ಸೀಮಿತವಾಗಿದ್ದ ಸಂಸ್ಥೆ ಸಮುದಾಯದ ಜೊತೆ ಕೆಲಸ ಮಾಡುವ ಗೋಶಾಲೆಯನ್ನು ಪ್ರಾರಂಭಿಸುತ್ತಿರುವುದು ಸಮಾಜಮುಖಿ ಚಟುವಟಿಕೆಯ ಇನ್ನೊಂದು ಭಾಗವಾಗಿದೆ. ಗೋಸಾಕಾಣಿಕೆಯನ್ನು ಅತ್ಯಂತ ಶ್ರದ್ದೆಯಿಂದ ನಡೆಸಿಕೊಂಡು ಬಂದರೆ ಇದರಿಂದ ಆರ್ಥಿಕಾಭಿವೃದ್ದಿ ಸಾಧ್ಯವಿದೆ ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್‍ನ ಎಜಿಎಂ ನಾಗರಾಜ್ ಮಾತನಾಡಿ, ಚರಕ ಎಂದಾಕ್ಷಣ ಬಟ್ಟೆ ಉತ್ಪನ್ನದ ಕಾರ್ಖಾನೆ ಎಂಬ ಮಾತಿತ್ತು. ಈಗ ಅದು ಗೋಶಾಲೆ ಇನ್ನಿತರೆ ಚಟುವಟಿಕೆ ಮೂಲಕ ಸಮಾಜಮುಖಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಮ್ಮ ಬ್ಯಾಂಕ್ ಚರಕ ಸಂಸ್ಥೆಯ ಗೋಶಾಲೆಗೆ ತನ್ನ ಪರಿಮಿತಿಯೊಳಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಚರಕ ಸಂಸ್ಥೆಯ ಪ್ರಸನ್ನ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಮಾತಿಗೆ ಅನುಗುಣವಾಗಿ ಪ್ರತಿಯೊಂದು ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಗೋಶಾಲೆ ಮೊದಲ ಘಟ್ಟವಾಗಿದ್ದು ಗ್ರಾಮೀಣ ಗುಡಿ ಕೈಗಾರಿಕೆಗಳ ಕುರಿತು ನಿರಂತರ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಲು ಚಿಂತನೆ ನಡೆಸಲಾಗಿದೆ. ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಚರಕ ಹೆಣ್ಣುಮಕ್ಕಳು ಗೋಶಾಲೆ ನಿರ್ಮಿಸಿದ್ದಾರೆ. ಗೋಶಾಲೆಯ ಮೇವುಗಳಿಗೆ ಪ್ರತಿನಿತ್ಯ ಮೇವು, ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಕರ್ನಾಟಕ ಬ್ಯಾಂಕ್‍ನ ಸ್ಥಳೀಯ ವ್ಯವಸ್ಥಾಪಕ ವಾಮನ ಹೆಬ್ಬಾರ್, ಗ್ರಾಮ ಪಂಚಾಯ್ತಿ ಸದಸ್ಯೆ ಸುಮಾ, ಪ್ರಮುಖರಾದ ಪೀಟರ್, ಡಾ. ಎಂ.ಗಣೇಶ್, ಮಹಾಲಕ್ಷ್ಮಮ್ಮ ಇನ್ನಿತರರು ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *