
ಸಾಗರ :- ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತಪರ ಯೋಜನೆ ಜಾರಿಗೆ ತರುತ್ತಿದೆ. ಇಲಾಖೆ ರೈತರಿಗೆ ಸಿಗುವ ಸೌಲತ್ತುಗಳ ಬಗ್ಗೆ ಅರಿವುಮೂಡಿಸುವ ಕೆಲಸವನ್ನು ಸಕಾಲದಲ್ಲಿ ಮಾಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ವತಿಯಿಂದ ನಿರ್ಮಿಸಲಾದ ಸುಮಾರು 1.17 ಕೋಟಿ ರೂ. ವೆಚ್ಚದ ಸಾಗರ ಉಪವಿಭಾಗದ ಕೃಷಿ ನಿರ್ದೇಶಕರ ಕಚೇರಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಮಲೆನಾಡು ಭತ್ತದ ಕಣಜ ಹೋಗಿ ಅಡಿಕೆ ಕಣಜವಾಗಿದೆ. ಭತ್ತ ಬೆಳೆಯುತ್ತಿದ್ದ ಜಾಗವನ್ನು ಅಡಿಕೆ ಅತಿಕ್ರಮಿಸಿದ್ದು, ಭತ್ತದ ಬೆಳೆ ಬಗ್ಗೆ ನಿರಾಸಕ್ತಿ ಬೇಡ. ಅಡಿಕೆ ಜೊತೆಗೆ ಭತ್ತದ ಬೆಳೆಗೂ ಒತ್ತು ನೀಡಬೇಕು ರೈತರಿಗೆ ಅಗತ್ಯ ಮಾಹಿತಿ ನೀಡಲು ಇಂತಹ ಮಾಹಿತಿ ಕೇಂದ್ರಗಳ ಅಗತ್ಯ ಹೆಚ್ಚು ಇದೆ. ರೈತರಿಗೆ ಸಿಗುವ ಯೋಜನೆಗಳು ಪರಿಣಾಮಕಾರಿಯಾಗಿ ಅವರಿಗೆ ತಲುಪಬೇಕು. ರೈತರನ್ನು ಇಲಾಖೆ ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಾಲಕಾಲಕ್ಕೆ ರೈತರು ಕೃಷಿ ಕುರಿತು ಆಗುತ್ತಿರುವ ಬದಲಾವಣೆ ಬಗ್ಗೆ ಅರಿವು ಹೊಂದಿರಬೇಕು ಎಂದು ಹೇಳಿದರು.
ರೈತರು ತಮ್ಮ ಫಸಲಿಗೆ ಔಷಧಿ ಸಿಂಪಡಿಸಬೇಕಾದರೆ ಹೆಚ್ಚು ಜಾಗೃತೆ ಇರಬೇಕು. ಜಾಹಿರಾತಿಗೆ ಮೊರೆ ಹೋಗಿ ಯಾವುದ್ಯಾವುದೋ ಔಷಧಿಯನ್ನು ಫಸಲಿಗೆ ಸಿಂಪಡಿಸಬೇಡಿ. ರೈತರು ಫಸಲು ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಿರುವ ಅನೇಕ ಉದಾಹರಣೆ ನಮ್ಮ ಎದುರಿಗೆ ಇದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸೂಕ್ತ ತರಬೇತಿ ರೈತರಿಗೆ ನೀಡುವ ಮೂಲಕ ಅವರು ಕೃಷಿಯಲ್ಲಿ ಪ್ರಾವಿಣ್ಯತೆ ಸಾಧಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಕಿರಣಕುಮಾರ್, ನಗರಸಭೆ ಸದಸ್ಯರಾದ ಶಂಕರ ಅಳ್ವಿಕೋಡಿ, ಗಣಪತಿ ಮಂಡಗಳಲೆ, ನಾಗರತ್ನ ನಾರಾಯಣಯಪ್ಪ, ರವಿ ಲಿಂಗನಮಕ್ಕಿ, ಪ್ರಮುಖರಾದ ಚೇತನರಾಜ ಕಣ್ಣೂರು, ಕೆ.ಹೊಳೆಯಪ್ಪ, ಲೋಕೇಶ್, ಜಯಕುಮಾರ್ ಇನ್ನಿತರರು ಹಾಜರಿದ್ದರು. ಕುಮಾರ್ ಸ್ವಾಗತಿಸಿದರು. ವಿನಾಯಕ ರಾವ್ ಬೇಳೂರು ವಂದಿಸಿದರು.