
ಶಿವಮೊಗ್ಗ :- ರಾಜ್ಯ ಸರ್ಕಾರ ರೇಷನ್ ಕಾರ್ಡ್ ಬಗ್ಗೆ ಗೊಂದಲ ಮೂಡಿಸಿದ್ದು, ಬಡವರು ಪರಿತಪಿಸುವಂತಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೊಂದಲ ಹುಟ್ಟಿಸುತ್ತಿದೆ. ಗೊಂದಲ ಪರಿಹಾರ ಮಾಡುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡಬೇಕಾಗಿದೆ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಮುನಿಯಪ್ಪನವರು ವಾರದಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಬಗೆಹರಿಸದಿದ್ದರೆ ಬಡವರನ್ನು ಸಂಘಟಿಸಿ ರಾಷ್ಟ್ರಭಕ್ತರ ಬಳಗದಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿರು.
ರಾಜ್ಯ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿದಾರರ ಕಾರ್ಡ್ ರದ್ದುಮಾಡಿದರೆ ಬೇಸರವಿಲ್ಲ. ಆದರೆ ಬಡವರ ಕಾರ್ಡ್‌ನ ಸುದ್ದಿಗೆ ಬಂದರೆ ಪರಿಣಾಮ ಸರಿಇರುವುದಿಲ್ಲ. ಬಡವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.
ವೃದ್ಧಾಪ್ಯ ವೇತನ, ರೇಷನ್, ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳಿಗೆ ರೇಷನ್ ಕಾರ್ಡ್ ರದ್ದುಮಾಡುವುದರಿಂದ ತೊಂದರೆಯಾಗಲಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಗಮನಹರಿಸಬೇಕು. ನಮ್ಮ ಜಿಲ್ಲೆಯಲ್ಲಿ ೩.೮೦ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ,೨ ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಕೇಂದ್ರ ಸರ್ಕಾರದ ನೀತಿಯಿಂದ ನಮಗೆ ಸಮಸ್ಯೆ ಆಗಿದೆ ಎಂದು ಕೇಂದ್ರದ ಮೇಲೆ ತಪ್ಪು ಹೊರಿಸುತ್ತಿದ್ದಾರೆ. ಶ್ರೀಮಂತರನ್ನು ಹುಡುಕಿ ನಿಮ್ಮ ಖಜಾನೆಯನ್ನು ಭರ್ತಿ ಮಾಡಿಕೊಳ್ಳಿ, ಆದರೆ ಬಡವರ ಹೊಟ್ಟೆ ಮೇಲೆ ಏಕೆ ಹೊಡೆಯುತ್ತಿರ ಎಂದು ಪ್ರಶ್ನೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ ಈ ಸ್ವತ್ತು ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದು ಕಮಿಷನರ್‌ಗೆ ಗೊತ್ತಿದೆಯೂ ಇಲ್ಲವೂ ಗೊತ್ತಿಲ್ಲ. ಅಧಿಕಾರಿಗಳು ದುಡ್ಡು ಹಂಚಿಕೊಂಡು ಆರಾಮಾಗಿದ್ದಾರೆ. ಆದರೆ ಜನರು ಮಾತ್ರ ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ ಚಿಕಿತ್ಸಾ ದರದ ಮೇಲೂ ಹೆಚ್ಚು ಮಾಡಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದರ ಸೂಚನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಈ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ರುದ್ರಯ್ಯ ಶಾಸ್ತ್ರಿ, ಮೋಹನ್‌ಜಧವ್, ಸತ್ಯನಾರಾಯಣ್, ಬಾಲು, ಸಾಕ್ರಾನಾಯ್ಕ, ಅ.ಮಾ.ಪ್ರಕಾಶ್ ಮೊದಲಾದವರು ಇದ್ದರು.